×
Ad

ʼಮನ್‌ ಕೀ ಬಾತ್ʼನಲ್ಲಿ 'ಕಲಬುರಗಿ ರೊಟ್ಟಿ' ಪ್ರಸ್ತಾಪಿಸಿದ ಮೋದಿ | ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ಸಹಕಾರಿ: ಬಿ.ಫೌಝಿಯಾ ತರನ್ನುಮ್

Update: 2025-06-29 22:04 IST

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರವಿವಾರ ತಮ್ಮ ಮನ್ ಕೀ ಬಾತ್ ನಲ್ಲಿ “ಕಲಬುರಗಿ ರೊಟ್ಟಿ” ಬಗ್ಗೆ ಪ್ರಸ್ತಾಪಿಸಿರುವುದು ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯವೇ ಹೆಮ್ಮೆಪಡುವ ಸಂಗತಿಯಾಗಿದ್ದು, ಇದು ಕಲಬುರಗಿ ರೊಟ್ಟಿ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಣೆಗೂ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಎಂದಿದ್ದಾರೆ.

ಮಹಿಳಾ‌ ಸ್ವ-ಸಹಾಯ ಸಂಘದ ಸದಸ್ಯರು ಉತ್ಪಾದಕರ ಒಕ್ಕೂಟದ ಮೂಲಕ ಪ್ರತಿ ದಿನ 3,000 ರೊಟ್ಟಿ ಮಾರಾಟ ಮಾಡುತ್ತಿದ್ದು, ಸಿರಿಧಾನ್ಯ ಶಕ್ತಿ ಹಳ್ಳಿ ದಾಟಿ ಪಟ್ಟಣಕ್ಕೆ ಕಾಲಿಟ್ಟಿದೆ. ಬೆಂಗಳೂರುದಂತಹ ಮೆಟ್ರೋ ಸಿಟಿಯಲ್ಲಿ ವಿಶೇಷ ಕೌಂಟರ್ ನಲ್ಲಿ ರೊಟ್ಟಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದನ್ನು ನೋಡಿದರೆ ಇದರ ಬೇಡಿಕೆ ಅರಿವಾಗುತ್ತದೆ. ಇದರಿಂದಾಗಿ ಸಹಜವಾಗಿಯೆ ಮಹಿಳೆಯರ ಅದಾಯ ಉತ್ಪನ್ನ ಹೆಚ್ಚಳಗೊಳ್ಳುತ್ತಿದೆ ಎಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಅವರು ಹೇಳಿದ್ದರು.

ಶೇ.90ರಷ್ಟು ಮಳೆಯಾಶ್ರಿತ ಬಿತ್ತನೆ ಪ್ರದೇಶ ಹೊಂದಿರುವ ಕಲಬುರಗಿ ಜಿಲ್ಲೆಯ ಪ್ರಮುಖ ಬೆಳೆ "ಜೋಳ". ಜೋಳದ ರೊಟ್ಟಿ ಜಿಲ್ಲೆಯ ಮೂಲ ಆಹಾರ. ಜೋಳದ ರೊಟ್ಟಿಯಂತೆ ಸಜ್ಜೆ ರೊಟ್ಟಿ ಸಹ ಬಲುರುಚಿ. ಬೇರೆಡೆಯಿಂದ ಕಲಬುರಗಿಗೆ ಬರುವವರು ಕಲಬುರಗಿ ರೊಟ್ಟಿ ರುಚಿ ನೋಡದೆ ಹೋದವರಲ್ಲ. ವಿಶೇಷವಾಗಿ ಚಿತ್ತಾಪುರ ತಾಲ್ಲೂಕಿನಲ್ಲಿ ಬೆಳೆಯುವ ಬಿಳಿ ಜೋಳ ಮುತ್ತಿನಂತಿದ್ದು, ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಸಿದ್ಧವಾಗಿದೆ ಎಂದು ಡಿ.ಸಿ. ಬಿ.ಫೌಝಿಯಾ ಅವರು ತಿಳಿಸಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ಮತ್ತು ಸಿರಿಧ್ಯಾನ ಶಕ್ತಿ ಪಸರಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತವು ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಹಾಗೂ ಇತರೆ ಇಲಾಖೆಗಳ ವಿವಿಧ ಯೋಜನೆಗಳ ಸಹಾಯಧನದಿಂದ ಈವರೆಗೆ ಜಿಲ್ಲೆಯಲ್ಲಿ 100ಕ್ಕೂ ಅಧಿಕ ರೊಟ್ಟಿ ಮಾಡುವ ಯಂತ್ರಗಳನ್ನು ನೀಡಿ ಮಹಿಳೆಯರಿಗೆ ಮತ್ತು ಮಹಿಳಾ ಸ್ವಸಹಾಯ ಸಂಘದವರಿಗೆ ನೀಡಲಾಗಿದೆ. ಕೃಷಿ ಇಲಾಖೆಯು ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ 5 ಲಕ್ಷ ರೂ. ಮತ್ತು ಸಕ್ಕರೆ ಕಾರ್ಖಾನೆಗಳಿಂದ ಸಿ.ಎಸ್.ಆರ್ ನಿಧಿಯಡಿ 6 ಲಕ್ಷ ರೂ. ಅನುದಾನ ಒದಗಿಸಿದೆ ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.

ಪರಿಣಾಮ ಪ್ರತಿ ದಿನ ಮಹಿಳೆಯರು ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದು, ಮಾಸಿಕ 15-20 ಸಾವಿರ ರೂ. ಆದಾಯಗಳಿಸುತ್ತಿದ್ದಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಜೋಳಕ್ಕೆ ಬೇಡಿಕೆ ಹೆಚ್ಚಾಗಿ ರೈತರ ಆದಾಯ ದ್ವಿಗುಣವಾಗಲಿದೆ ಎಂದರು.

ಇನ್ನು ಕಲಬುರಗಿ ರೊಟ್ಟಿ ಅಧಿಕ ಮಾರಾಟಕ್ಕೆ ಕಲಬುರಗಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ “ಕಲಬುರಗಿ ರೊಟ್ಟಿ” ಎನ್ನುವ ಬ್ರ್ಯಾಂಡ್ ಹೆಸರಿನೊಂದಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಕಲಬುರಗಿ ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ ಅದರ ಮೂಲಕ ರೊಟ್ಟಿ ಮಾರಾಟಕ್ಕೆ ಪ್ರೋತ್ಸಾಹಿಸಲಾಗಿದೆ. ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹೈದ್ರಾಬಾದ, ಬೀದರ, ಪುಣೆ, ಮುಂಬೈ, ನವದೆಹಲಿಯಲ್ಲಿಯೂ ಕೂಡಾ ಮಾರಾಟ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ. ಈಗಾಗಲೆ ಅಮೆಜಾನ್, ಜೊಮಾಟೋ ನಲ್ಲಿಯೂ ಕಲಬುರಗಿ ರೊಟ್ಟಿ ಸಿಗುತ್ತಿದೆ. ಗ್ರಾಹಕರು www.kalaburagirotti.com ಮೂಲಕ ನೋಂದಣಿ ಮಾಡಿಸಿ ಡೋರ ಡೆಲಿವರಿ ಸೇವೆ ಪಡೆಯಬಹುದಾಗಿದೆ.

"ಕಲಬುರಗಿ ರೊಟ್ಟಿ” ಯಲ್ಲಿರುವ ಪೋಷಕಾಂಶಗಳನ್ನು ಪರೀಕ್ಷೆ ಮಾಡಿಸಿ ಜಿ.ಎಸ್.ಟಿ, ಪ್ಯಾನ್ ನೊಂದಣಿ ಹಾಗೂ ಎಪ್.ಎಸ್.ಎಸ್.ಎ.ಐ ನಿಂದ ಆಹಾರ ಸುರಕ್ಷತೆ ಗುಣಮಟ್ಟದ ಪ್ರಮಾಣ ಪತ್ರಗಳನ್ನು ಪಡೆಯುವ ಮೂಲಕ ಗುಣಮಟ್ಟ ಕಾಪಾಡಿಕೊಳ್ಳಲಾಗಿದೆ. ಪ್ರಸ್ತುತ ಬೇರೆ ರಾಜ್ಯಗಳಿಗೆ ರವಾನೆಯಾಗುತ್ತಿರುವ ಕಲಬುರಗಿ ರೊಟ್ಟಿ ಹೊರ ದೇಶಕ್ಕೂ ಸರಬರಾಜು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ “ಕಲಬುರಗಿ ರೊಟ್ಟಿ” ಜಿಲ್ಲೆಯಲ್ಲಿ ಕನಿಷ್ಟ 1,000 ಮಹಿಳೆಯರಿಗೆ ನೇರ ಉದ್ಯೋಗ ಹಾಗೂ ಸಾವಿರಾರು ಜನರಿಗೆ ಪರೋಕ್ಷವಾಗಿ ಉದ್ಯೋಗಾವಕಾಶ ದೊರೆಯಲು ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News