ಕಲಬುರಗಿ | ವ್ಯಕ್ತಿ ಮೇಲೆ ಚಿರತೆ ದಾಳಿ
Update: 2025-03-11 14:58 IST
ಕಲಬುರಗಿ : ಹೊಲದಲ್ಲಿ ಕುರಿಗಳನ್ನು ಮೇಯಿಸುವಾಗ ಚಿರತೆಯೊಂದು ಏಕಾಏಕಿ ದಾಳಿ ಮಾಡಿ ಕುರಿಗಾಹಿಯನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ಜೇವರ್ಗಿ ತಾಲೂಕಿನ ರೇವನೂರ ಗ್ರಾಮದಲ್ಲಿ ನಡೆದಿದೆ.
ಜೇವರ್ಗಿ ತಾಲೂಕಿನ ರೇವನೂರ ಗ್ರಾಮದ ನಿಂಗಪ್ಪ ಮಾಳಪ್ಪ ಪೂಜಾರಿ ಹರನೂರ (45) ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಜೇವರ್ಗಿ ವಲಯ ಅರಣ್ಯ ಅಧಿಕಾರಿ ಸಿದ್ದಣ್ಣಗೌಡ ಪಾಟೀಲ್ ಮಾತನಾಡಿ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಕುರಿಗಾಹಿ ರಕ್ತದ ಮಾದರಿಯನ್ನು ತೆಗೆದುಕೊಂಡು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಚಿರತೆಯನ್ನು ಸೆರೆ ಹಿಡಿಯಲು ವಿಶೇಷ ತಂಡವನ್ನು ರಚಿಸುವುದಾಗಿ ಭರವಸೆ ನೀಡಿದರು.
ಜೇವರ್ಗಿ ಪೊಲೀಸ್ ಠಾಣೆಯ ಪೊಲೀಸರು ಕೂಡ ಆಸ್ಪತ್ರೆಗೆ ಧಾವಿಸಿ ಪ್ರಕರಣವನ್ನು ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ