ಕಲಬುರಗಿ: ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ
ಕಲಬುರಗಿ: ತಾಲೂಕಿನ ಅವರಾದ (ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದ ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ಶಿಬಿರವನ್ನು ಗ್ರಾಮ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಂಡೆಪ್ಪ ದನಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಶಿಬಿರದ ಮುಖ್ಯ ಉದ್ದೇಶ ಕೂಲಿಕಾರರ ದೇಹಾರೋಗ್ಯದ ಬಗ್ಗೆ ಅರಿವು ಮೂಡಿಸಿ, ಉತ್ತಮ ಆರೋಗ್ಯ ಸಂರಕ್ಷಣಾ ಅಭ್ಯಾಸಗಳನ್ನು ರೂಡಿಸಿಕೊಳ್ಳುವಂತೆ ಪ್ರೇರೇಪಿಸುವುದಾಗಿತ್ತು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಒಟ್ಟು 122 ಕೂಲಿ ಕಾರ್ಮಿಕರು ಭಾಗವಹಿಸಿದ್ದು, ಇವರಲ್ಲಿ 82 ಮಹಿಳೆಯರು ಹಾಗೂ 40 ಪುರುಷರು ಇದ್ದರು. ಸ್ಥಳದಲ್ಲಿಯೇ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣು, ಹಲ್ಲು ಹಾಗೂ ಸ್ತನ ಕ್ಯಾನ್ಸರ್ ತಪಾಸಣೆಯಂತಹ ಹಲವಾರು ತಪಾಸಣೆಗಳನ್ನು ಉಚಿತವಾಗಿ ನೆರವೇರಿಸಲಾಯಿತು.
ಸಮುದಾಯ ಆರೋಗ್ಯ ಕೇಂದ್ರದ ಡಾ.ಶಿಲ್ಪಾ ಸಿ. ನೇತೃತ್ವದಲ್ಲಿ ವೈದ್ಯ ಸಿಬ್ಬಂದಿ, ಐಈಸಿ ಸಂಯೋಜಕರಾದ ಮೋಸಿನ್ ಖಾನ್, ಗ್ರಾಮ ಪಂಚಾಯತ್ ಸಿಬ್ಬಂದಿಯಾದ ಅಲೀಮ್ ಮತ್ತು ದೇವರಾಜ್ ಉಪಸ್ಥಿತರಿದ್ದರು.