×
Ad

ಕಲಬುರಗಿ | ಹವಾಮಾನ ಬದಲಾವಣೆಯಿಂದ ಪರಿಸರದ ಮೇಲೆ ಹಾನಿ: ಡಾ.ದಾಕ್ಷಾಯಿಣಿ ಅವ್ವಾಜಿ

Update: 2025-06-05 23:20 IST

ಕಲಬುರಗಿ: ಹವಾಮಾನ ಬದಲಾವಣೆಯು ಪರಿಸರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತಿದ್ದು, ಮಾನವ ಜನಾಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗುರುವಾರ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ, ವಿವಿಯ ವ್ಯವಹಾರ ಅಧ್ಯಯನ ನಿಕಾಯದ ವತಿಯಿಂದ ಕಲಬುರಗಿ ನಗರದಲ್ಲಿ 1,000 ಸಸಿಗಳನ್ನು ನೆಡುವ ಒಂದು ವಾರದ ಹಸಿರು ಮಿಷನ್ ಉಪಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಮರಗಳನ್ನು ಅನಿಯಂತ್ರಿತವಾಗಿ ಕಡಿಯುವುದು, ಗಾಳಿಯಲ್ಲಿ ಇಂಗಾಲದ ಅಂಶದ ಅಪಾಯಕಾರಿ ಹೆಚ್ಚಳ, ಜಲಮೂಲಗಳು ಮತ್ತು ನದಿಗಳಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದ್ದು, ಇದರ ಪರಿಣಾಮವಾಗಿ ಹವಾಮಾನ ಬದಲಾವಣೆಯು ಮಾನವ ಜನಾಂಗದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೈನುಗಾರಿಕೆ ವಿಜ್ಞಾನ ಕಾಲೇಜಿನ ಪ್ರೊ.ಮಲ್ಲಿನಾಥ್ ಹೆಮಾಡಿ ಮತ್ತು ಸ್ವಾಭಿಮಾನ ಸ್ವದೇಶಿ ಗುಂಪಿನ ಸ್ಥಾಪಕ ಸದಸ್ಯ ಅನಿಲಕುಮಾರ ತಂಬಾಕೆ ಮಾತನಾಡಿ, ಮನುಷ್ಯ ಮತ್ತು ಪ್ರಕೃತಿ ಸಂಘರ್ಷದಲ್ಲಿ ಪರಿಸರಕ್ಕೆ ಆಗುವ ಹಾನಿಯ ಪ್ರಮಾಣ ಮತ್ತು ಮಾನವಕುಲದ ಒಟ್ಟಾರೆ ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ವಿವರಿಸಿದರು.

ಇದಕ್ಕೂ ಮೊದಲು, ಡಾ.ಅವ್ವಾಜಿ ಶರಣಬಸವೇಶ್ವರ ದೇವಸ್ಥಾನದ ಸಂಕೀರ್ಣದಲ್ಲಿ ಹಸಿರು ಮಿಷನ್ ಜಾಥಾ ಚಾಲನೆ ನೀಡಿ, ದೇವಸ್ಥಾನದಿಂದ ಶರಣಬಸವ ವಿಶ್ವವಿದ್ಯಾಲಯಕ್ಕೆ ನಡೆದ ವಿದ್ಯಾರ್ಥಿಗಳ ರ್‍ಯಾಲಿಯನ್ನು ಉದ್ಘಾಟಿಸಿದರು.

ಡಾ. ಅವ್ವಾಜಿ ಅವರು ದೇವಾಲಯ ಸಂಕೀರ್ಣದಲ್ಲಿ ಹಣ್ಣು ಬಿಡುವ ಮರಗಳ ಸಸಿಗಳನ್ನು ನೆಟ್ಟರು. ವಿವಿಯಲ್ಲಿ ನಡೆದ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ್ ಅಧ್ಯಕ್ಷತೆ ವಹಿಸಿದ್ದರು. ವಿವಿಯ ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ, ವ್ಯವಹಾರ ಅಧ್ಯಯನ ನಿಕಾಯದ ಡೀನ್ ಮತ್ತು ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ಎಚ್. ಹೊನ್ನಳ್ಳಿ, ಎಂಬಿಎ ವಿಭಾಗದ ಚೇರಪರ್ಸನ್ ಡಾ.ಬಿ.ಎಸ್.ಹೂಗಾರ, ಬಿಬಿಎ ವಿಭಾಗದ ಚೇರಪರ್ಸನ್ ಡಾ.ಎಸ್.ಕೆ.ಶಶಿಕಾಂತ್, ಪ್ರವಾಸೋದ್ಯಮ ವಿಭಾಗದ ಚೇರಪರ್ಸನ್ ಕಲ್ಯಾಣರಾವ್ ಪಾಟೀಲ್, ಎಂಬಿಎ (ಹಾಸ್ಪಿಟಲ್ ಮ್ಯಾನೆಜಮೆಂಟ್) ವಿಭಾಗದ ಚೇರಪರ್ಸನ್ ಡಾ.ಎಸ್.ಎಚ್.ಶಹಾಪುರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News