ಆಳಂದ | ಖಬರಸ್ತಾನ ಕಾಮಗಾರಿಯಲ್ಲಿ ಅಧಿಕಾರಿಗಳಿಂದ ಅವ್ಯವಹಾರ: ಆರೋಪ
ಕಲಬುರಗಿ: ಆಳಂದ ತಾಲೂಕಿನ ಬೆಳಮಗಿ ಗ್ರಾಮ ಪಂಚಾಯತ್ ನಲ್ಲಿ 2023-24ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಮುಸ್ಲಿಂ ಸ್ಮಶಾನ ಭೂಮಿ ಅಭಿವೃದ್ಧಿಗಾಗಿ ಮಂಜೂರಾದ 5 ಲಕ್ಷ ರೂಪಾಯಿಯಲ್ಲಿ ಕೇವಲ ಒಂದು ಗೇಟ್ ನಿರ್ಮಾಣ ಮಾಡಿ, 4 ಲಕ್ಷ ರೂಪಾಯಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.
ಬೆಳಮಗಿ ಗ್ರಾಮ ಪಂಚಾಯತ್ ಪಿಡಿಒ ಬಶೀರ್ ಜಮಾದಾರ್ ಮತ್ತು ಎಇ ಆಶಿಫ್ ಪಟೇಲ್ ವಿರುದ್ಧ ಗ್ರಾಮ ಪಂಚಾಯತ್ ಸದಸ್ಯೆಯೋರ್ವರು ಈ ಆರೋಪವನ್ನು ಮಾಡಿದ್ದಾರೆ.
ಮೇ13ರಂದು ಜಿಪಂ ಒಂಬುಡ್ಸ್ಮನ್ ಅಧಿಕಾರಿಗಳು ಕಾಮಗಾರಿ ಸ್ಥಳದ ತನಿಖೆಗೆ ಭೇಟಿ ನೀಡಿದಾಗ ಈ ಅವ್ಯವಹಾರದ ವಿವರಗಳು ಬೆಳಕಿಗೆ ಬಂದಿವೆ ಎಂದು ಬೆಳಮಗಿ ಗ್ರಾಪಂ ಸದಸ್ಯೆ ಪಾರ್ವತಿ ಅಂಬಾರಾಯ ಆರೋಪಿಸಿದರು.
ಪಿಡಿಒ ಮತ್ತು ಎಇ ಇತರ ಸಮುದಾಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡದೆ, ಜಾತಿ ತಾರತಮ್ಯ ಮಾಡುತ್ತಿದ್ದಾರೆ. ವಿಶೇಷವಾಗಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸಂಬಂಧಿಸಿದ ಬೆಳಮಗಿ ಬುದ್ಧ ವಿಹಾರ ಉದ್ಯಾನವನದ ಅಭಿವೃದ್ಧಿ ಕಾಮಗಾರಿಯನ್ನು ಕ್ರಿಯಾಯೋಜನೆಯಡಿ ಆಯ್ಕೆ ಮಾಡದೆ ಭೇದಭಾವ ಮಾಡಲಾಗಿದೆ. ಇದರಿಂದ ಗ್ರಾಮದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮತ್ತು ಜಗಳ ಸೃಷ್ಟಿಯಾಗಿದೆ ಎಂದು ಪಾರ್ವತಿ ಆರೋಪಿಸಿದರು.
ಭ್ರಷ್ಟಾಚಾರ ಮತ್ತು ಜಾತಿ ತಾರತಮ್ಯದ ಆರೋಪಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಸಿಇಒ ಮತ್ತು ತಾಲೂಕಿನ ಇಒ ಅವರಿಗೆ ಒತ್ತಾಯಿಸಿರುವ ಪಾರ್ವತಿ ಅಂಬಾರಾಯ, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.