ಇ-ಸ್ವತ್ತು ಕಾರ್ಯಾಚರಣೆಯಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳೊಂದಿಗೆ ಪ್ರಿಯಾಂಕ್ ಖರ್ಗೆ ಸಮಾಲೋಚನೆ
ಕಲಬುರಗಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ-ಸ್ವತ್ತು ಕಾರ್ಯಕ್ರಮವನ್ನು ಪ್ರಾರಂಭಿಸಲಿರುವ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸವಾಲುಗಳು ಹಾಗೂ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಮಾಲೋಚನೆ ನಡೆಸಿದ್ದಾರೆ.
ಇ-ಸ್ವತ್ತು ಮಂಜೂರಾತಿ ವ್ಯವಸ್ಥೆಯನ್ನು ಬೇಡಿಕೆ ಆಧಾರಿತ ವಿಧಾನದಿಂದ ಅಭಿಯಾನ ಆಧಾರಿತ ಮಾದರಿಗೆ ಪರಿವರ್ತನೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂಬಂಧ ಎರಡು ದಿನಗಳಿಂದ ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೀರ್ಘ ಚರ್ಚೆ ನಡೆಸಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್‌ಗಳ ತೆರಿಗೆಗಳು, ದರಗಳು ಮತ್ತು ಶುಲ್ಕಗಳು) ನಿಯಮಗಳು, 2025ನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ನಿಯಮಗಳು ಪಂಚತಂತ್ರ 2.0 ವೇದಿಕೆಯಲ್ಲಿ ಲಭ್ಯವಿರುವ 97 ಲಕ್ಷಕ್ಕೂ ಹೆಚ್ಚು ಡಿಜಿಟಲೀಕೃತ ಆಸ್ತಿಗಳಿಗೆ ಇ-ಖಾತಾಗಳನ್ನು ಆನ್‍ಲೈನ್‍ನಲ್ಲಿ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಇದರಿಂದಾಗಿ ನಾಗರಿಕರು ಖಾತಾ ಸೇವೆಗಳಿಗಾಗಿ ಗ್ರಾಮ ಪಂಚಾಯತ್ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಸಭೆಯಲ್ಲಿ ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ. ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಉಮಾ ಮಹದೇವನ್, ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.