Sedam | ಮಾಧ್ಯಮಗಳು ನಕಾರಾತ್ಮಕ ಸುದ್ದಿಗಳಿಗಷ್ಟೇ ಸೀಮಿತವಾಗದೆ ಸಮಾಜಮುಖಿ ಚಿಂತನೆಗಳಿಗೆ ಆದ್ಯತೆ ನೀಡಲಿ: ಡಾ.ಬಸವರಾಜ ಪಾಟೀಲ
ಸೇಡಂ : ಕಲ್ಯಾಣ ಕರ್ನಾಟಕ ಭಾಗವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ವಿಶಿಷ್ಟ ಗೌರವ ಮತ್ತು ಇತಿಹಾಸ ಹೊಂದಿದೆ. ಇಂತಹ ಭಾಗದ ಮಾಧ್ಯಮಗಳು ಕೇವಲ ನಕಾರಾತ್ಮಕ ಸುದ್ದಿಗಳ ಪ್ರಸಾರಕ್ಕೆ ಸೀಮಿತವಾಗದೆ, ಸಮಾಜಮುಖಿ, ಸಾಂಸ್ಕೃತಿಕ ಹಾಗೂ ಸೃಜನಶೀಲ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂರಕ್ಷಕ ಡಾ. ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ಶ್ರೀ ಕೊತ್ತಲ ಬಸವೇಶ್ವರ ಸಭಾಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ನೂತನ ಕನ್ನಡ ಪತ್ರಿಕೆಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳ ಕುರಿತು ವರದಿಗಳು ಪ್ರಕಟವಾಗಬೇಕು. ಆದರೆ, ನಕಾರಾತ್ಮಕ ಸುದ್ದಿಗಳಿಗೆ ಅತಿಯಾದ ಪ್ರಾಮುಖ್ಯತೆ ನೀಡಬಾರದು. ವ್ಯಕ್ತಿಗಳ ಸಾಧನೆಗಳನ್ನು ಗುರುತಿಸಿ, ಮೆಚ್ಚುಗೆಯ ನಾಲ್ಕು ಸಾಲುಗಳನ್ನು ಬರೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ತಪ್ಪುಗಳಿದ್ದರೆ ನೇರ ಟೀಕೆಗೆ ಬದಲಾಗಿ, ‘ಹೀಗಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು’ ಎಂಬ ಧನಾತ್ಮಕ ಸಲಹೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ನಿತ್ಯದ ನಕಾರಾತ್ಮಕ ಸುದ್ದಿಗಳಿಂದ ಜನರಲ್ಲಿ ಬೇಸರ ಮೂಡುತ್ತಿದೆ. ಹೀಗಾಗಿ ಸಮಾಜಕ್ಕೆ ನೆಮ್ಮದಿ ನೀಡುವ, ಬದುಕನ್ನು ಸುಂದರಗೊಳಿಸುವ ಲೇಖನಗಳಿಗೆ ಪತ್ರಿಕೆಗಳಲ್ಲಿ ಅವಕಾಶ ಕಲ್ಪಿಸಬೇಕು. ಕೃಷಿ ಕಾಯಕದ ಮಹತ್ವ ಹಾಗೂ ನೀರಿನ ಸದ್ಬಳಕೆಯ ಕುರಿತು ಜನಜಾಗೃತಿ ಮೂಡಿಸುವ ಜವಾಬ್ದಾರಿಯನ್ನೂ ಮಾಧ್ಯಮಗಳು ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮಿಗಳು, ತೋಟಳ್ಳಿ ಹಾಗೂ ಸಂಗಾವಿ ಮಹಾಂತೇಶ್ವರ ಮಠದ ಶ್ರೀ ಡಾ. ತ್ರಿಮೂರ್ತಿ ಶಿವಾಚಾರ್ಯರು, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ರಾಜ್ಯ ಕೃಷಿ ಸಮಾಜದ ನಿರ್ದೇಶಕ ಬಸವರಾಜ ಪಾಟೀಲ ಊಡಗಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಯ್ಯಸ್ವಾಮಿ ಬಿಬ್ಬಳ್ಳಿ ಹಾಗೂ ಪತ್ರಿಕೆಯ ಸಂಪಾದಕ ನಾಗಯ್ಯಸ್ವಾಮಿ ಬೊಮ್ಮಳ್ಳಿ ಉಪಸ್ಥಿತರಿದ್ದರು.
ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶಿವಕುಮಾರ ನಿಡಗುಂದಾ ನಿರೂಪಿಸಿದರು. ಸಹ ಸಂಪಾದಕಿ ಡಾ. ಪಲ್ಲವಿ ಪಾಟೀಲ ಸ್ವಾಗತಿಸಿದರು. ಸಿದ್ದಯ್ಯಸ್ವಾಮಿ ಆಡಕಿ ವಂದಿಸಿದರು.