×
Ad

ವಿದ್ಯಾರ್ಥಿಗಳು ಉದ್ಯಮಶೀಲತೆ ಬೆಳೆಸಿಕೊಳ್ಳಿ : ಪ್ರೊ.ಶಶಿಕಾಂತ ಉಡಿಕೇರಿ

Update: 2025-09-27 17:42 IST

ಕಲಬುರಗಿ : ವಿದ್ಯಾರ್ಥಿಗಳು ಆರ್ಥಿಕ, ವ್ಯವಹಾರ ಮತ್ತು ನಿರ್ವಹಣಾ ಕೌಶಲ್ಯಗಳ ಜೊತೆಗೆ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವವದ್ಯಾಲಯದ ಕುಲಪತಿಗಳಾದ ಪ್ರೊ.ಶಶಿಕಾಂತ ಉಡಿಕೇರಿ ಹೇಳಿದರು.

ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಮರ್ಸ್ ಅಕಾಡೆಮಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿದ್ಯಾರ್ಥಿಗಳು 21ನೇ ಶತಮಾನದ ವ್ಯವಹಾರದ ರೂವಾರಿಗಳಾಗಬೇಕು. ಕೌಶಲ್ಯ ಬೆಳೆಸಿಕೊಂಡು ವ್ಯವಹಾರದಲ್ಲಿ ನಿಪುಣರಾಗಬೇಕು. ಆರ್ಥಿಕವಾಗಿ ಸಬಲರಾಗಬೇಕು. ದೊಡ್ಡ ಮಟ್ಟದಲ್ಲಿ ಉದ್ಯಮಿಗಳಾಗಬೇಕಾದರೆ ಅದಕ್ಕೆ ಶ್ರದ್ಧೆ, ನಿರ್ದಿಷ್ಟ ಗುರಿ, ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯು ವಿಶ್ವದ ಅಗ್ರಗಣ್ಯ ಸಾಲಿನಲ್ಲಿ ಇದೆ. ದೇಶದ ಆರ್ಥಿಕತೆಯ ಬೆಳವಣಿಗೆಗೆ ಇಂದಿನ ಯುವಜನತೆಯ ಕೊಡುಗೆ ಬಹಳಷ್ಟಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಶರಣಬಸವೇಶ್ವರ ಸಂಸ್ಥೆಯು ಈ ಭಾಗದ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ, ಜ್ಞಾನದಾಸೋಹ ಮಾಡುತ್ತಾ ಬಂದಿದೆ, ಪೂಜ್ಯ ಡಾ.ಅಪ್ಪಾಜಿಯವರ ಕನಸಿನ ಕೂಸಾದ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೊಡ್ಡ ಉದ್ಯಮಿಗಳಾಗಿದ್ದಾರೆ, ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ, ಅವರಂತೆ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಶರಣಬಸವ ವಿವಿಯ ಆಂಗ್ಲವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪಾಟೀಲ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ, ಇಂದಿನ ಯುವಜನತೆ ಆರೋಗ್ಯ ಕಡೆ ಹೆಚ್ಚಿನ ಗಮನಹರಿಸಬೇಕು, ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಯುಕ್ತ ಶಿಕ್ಷಣ ಪಡೆಯುವುದು ಅವಶ್ಯಕತೆ ಇದೆ. ಎಐ ಡಿಜಿಟಲ್, ಮಾರ್ಕೆಟಿಂಗ್, ಆನ್‌ಲೈನ್‌ ಮಾರ್ಕೆಟಿಂಗ್, ಸಾಫ್ಟ್‌ವೇರ್ ತಂತ್ರಜ್ಞಾನ ಬಳಕೆ ಹೀಗೆ ಅನೇಕ ಕೋರ್ಸುಗಳನ್ನು ಮಹಾವಿದ್ಯಾಲಯದಲ್ಲಿ ಹೇಳಿಕೊಡಲಾಗುತ್ತದೆ ಅವುಗಳನ್ನು ಕಲಿಯುವುದು ಅವಶ್ಯವಿದೆ ಎಂದರು.

ನಿವೃತ್ತ ಪ್ರಾಚಾರ್ಯೆ ಡಾ.ಇಂದಿರಾ ಶೇಟಕಾರ ಮಾತನಾಡಿದರು.

ವೇದಿಕೆ ಮೇಲೆ ನ್ಯಾಕ್ ಸಂಯೋಜಕಿ ಡಾ.ಸುನಂದಾ ವಂಜರಖೇಡೆ, ದೈಹಿಕ ನಿರ್ದೇಶಕ ಪ್ರೊ.ಮಹೇಶ ನಿಲೇಗಾರ, ವಿದ್ಯಾರ್ಥಿ ಸಂಘದ ಸಲಹೆಗಾರ್ತಿ ಪ್ರೊ.ಜಗದೇವಿ ಗುಳೇದ್, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಕು.ಲಕ್ಷ್ಮೀ ಪಾಟೀಲ ಇದ್ದರು.

ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ದಯಾನಂದ ಹೊಡಲ್ ಪ್ರಾಸ್ತಾವಿಕ ಮಾತನಾಡಿದರು, ಕು.ರೋಹಿಣಿ ಸ್ವಾಗತಿಸಿದರೆ,ಕು.ಅಮಿತ ಐನಾಪೂರ ಮತ್ತು ಕು.ಮಂಜುಶ್ರೀ ನಿರೂಪಿಸಿದರು, ಕು.ಓಂಕಾರ ವಂದಿಸಿದರು. ಕು.ವಿಶ್ವರಾಧ್ಯ, ಕು.ಸಮರ್ಥ ಪ್ರಾರ್ಥಿಸಿದರು, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News