ತಳವಾರ ಎಸ್‌ಟಿ ಪ್ರಮಾಣ ಪತ್ರ ಅರ್ಜಿ ತಿರಸ್ಕಾರ: ತಹಶೀಲ್ದಾರ್ ವಜಾಕ್ಕೆ ಜಿಲ್ಲಾಧಿಕಾರಿಗೆ ಮನವಿ
ಅಫಜಲಪುರ: ತಳವಾರ ಹಾಗೂ ಪರಿವಾರ ಸಮುದಾಯವನ್ನು ಕೇಂದ್ರ ಸರಕಾರ ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಿದ್ದರೂ, ಅಫಜಲಪುರ ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿ ಗ್ರೇಡ್-2 ತಹಶೀಲ್ದಾರ್ ಅವರನ್ನು ವಜಾಗೊಳಿಸುವಂತೆ ತಾಲೂಕು ಪರಿಶಿಷ್ಟ ಪಂಗಡ ಸಮಾಜ ಸೇವಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅಂಬಣ್ಣ ನಾಯ್ಕೋಡಿ ಅವರು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಗ್ರಾಮ ಒನ್ ಕೇಂದ್ರ, ನಾಡಕಚೇರಿ ಹಾಗೂ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ತಳವಾರ ಸಮುದಾಯದ ಎಸ್‌ಟಿ ಜಾತಿ ಪ್ರಮಾಣ ಪತ್ರದ ಅರ್ಜಿಗಳನ್ನು ಸ್ವೀಕರಿಸದಂತೆ ಮೌಖಿಕ ಸೂಚನೆ ನೀಡಲಾಗಿದೆ ಎಂದು ಆರೋಪಿಸಿದರು.
ಅರ್ಜಿ ಸ್ವೀಕರಿಸಿದ ಕೆಲ ಪ್ರಕರಣಗಳಲ್ಲಿಯೂ ಸ್ಥಳೀಯ ಪರಿಶೀಲನೆ ನಡೆಸದೆ ಕಚೇರಿಯಲ್ಲಿಯೇ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ತಾಲೂಕಿನಲ್ಲಿ 22 ಸಾವಿರಕ್ಕೂ ಅಧಿಕ ತಳವಾರ ಸಮುದಾಯದ ಜನಸಂಖ್ಯೆ ಇದ್ದರೂ, ಈವರೆಗೆ ಅತಿ ಕಡಿಮೆ ಸಂಖ್ಯೆಯ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರದ ಹೊಸ ಸುತ್ತೋಲೆಗಳು ಜಾರಿಯಲ್ಲಿದ್ದರೂ, ಹಳೆಯ ಆದೇಶಗಳನ್ನೇ ಆಧಾರವಾಗಿಟ್ಟುಕೊಂಡು ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದರಿಂದ ಸಮುದಾಯದ ಅರ್ಹರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅಂಬಣ್ಣ ನಾಯ್ಕೋಡಿ ದೂರಿದರು.
ಖಾಸಗಿ ಕೇಂದ್ರಗಳಲ್ಲಿ ಹೆಚ್ಚುವರಿ ಹಣ ಪಾವತಿಸಿ ಅರ್ಜಿ ಸಲ್ಲಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂತಹ ಅರ್ಜಿಗಳನ್ನೂ ಹಳೆಯ ಸುತ್ತೋಲೆಗಳ ಆಧಾರದ ಮೇಲೆ ತಿರಸ್ಕರಿಸುವ ಮೂಲಕ ಗ್ರೇಡ್-2 ತಹಶೀಲ್ದಾರ್ ಸಮುದಾಯದ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಹೀಗಾಗಿ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, “ಸಮಸ್ಯೆ ಕುರಿತು ಗ್ರೇಡ್-2 ತಹಶೀಲ್ದಾರ್ ಅವರನ್ನು ಕರೆಸಿ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ತಳವಾರ ಸಮುದಾಯದ ಅರ್ಹರಿಗೆ ನ್ಯಾಯಯುತವಾಗಿ ಜಾತಿ ಪ್ರಮಾಣ ಪತ್ರ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಶೀಲ್ದಾರ್ ಸಂಜೀವಕುಮಾರ್ ದಾಸರ, ಪರಿಶಿಷ್ಟ ಪಂಗಡ ಸಮಾಜ ಸೇವಾ ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷ ಭೀಮರಾಯ ಜಮಾದಾರ, ಸಂತೋಷ ತಳವಾರ, ದೇವಿಂದ್ರ ಜಮಾದಾರ, ಮಲ್ಲು ಜಮಾದಾರ ಹಾಗೂ ದತ್ತಪ್ಪ ಜಮಾದಾರ ಉಪಸ್ಥಿತರಿದ್ದರು.