×
Ad

ಕಲಬುರಗಿ| ಚಂದನಕೇರಾ ವ್ಯಾಪ್ತಿಯ ಹಳ್ಳಿಗಳನ್ನು ಚಿಂಚೋಳಿ ತಾಲೂಕಿನಿಂದ ಕೈ ಬಿಡದಂತೆ ಸ್ಥಳೀಯರಿಂದ ಆಗ್ರಹ

Update: 2025-08-22 19:41 IST

ಕಲಬುರಗಿ: ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಹಳ್ಳಿಗಳನ್ನು ತಾಲೂಕಿನಿಂದ ಕೈ ಬಿಟ್ಟು ಕಮಲಾಪುರ ತಾಲೂಕು ಪಟ್ಟಿಯಲ್ಲಿ ಸೇರಿಸಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಂಚೋಳಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಪ್ರಜಾ ಸೌಧದ ಮುಂಭಾಗದಲ್ಲಿ ಚಂದನಕೇರಾ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ಹಾಗೂ ತಾಂಡಾ ನಿವಾಸಿಗಳು ಸೇರಿಕೊಂಡು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಹೋರಾಟಗಾರ ಹಣಮಂತ ಪೂಜಾರಿ ಮಾತನಾಡಿ, ಚಂದನಕೇರಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಗ್ರಾಮಸ್ಥರು ಹಲವು ವರ್ಷಗಳಿಂದ ಚಿಂಚೋಳಿ ತಾಲೂಕಿಗೆ ಒಳಪಟ್ಟಿದ್ದಾರೆ.  ಕೊಟಗಾ, ರಾಣಾಪೂರ, ರಾಣಾಪೂರ ತಾಂಡಾ, ಮಂಡಗೋಳ ತಾಂಡಾ, ಸಿರಸನ್ ಬುಡಗಿ ತಾಂಡಾ, ಖನಿ ತಾಂಡಾ, ಕಲದೊಡ್ಡಿ ತಾಂಡಾ ಸೇರಿದಂತೆ ಇನ್ನಿತರ ಗ್ರಾಮ ಹಾಗೂ ತಾಂಡಾಗಳು ಚಂದನಕೇರಾ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿವೆ. ಆದರೆ ಇತ್ತೀಚೆಗೆ  ಚಂದನಕೇರಾ ಗ್ರಾಮವನ್ನು ಕಮಲಾಪೂರ ತಾಲೂಕಿಗೆ ಸೇರಿಸುವಂತೆ ಕೆಲವರು  ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.  

ಚಿಂಚೋಳಿ ತಾಲೂಕು ಚಂದನಕೇರಾ ಹಾಗೂ ಅದಕ್ಕೆ ಒಳಪಡುವ ಸುತ್ತಮುತ್ತಲಿನ ಗ್ರಾಮಗಳಿಗೆ ಹಾಗೂ ತಾಂಡಾಗಳಿಗೆ ಸಮೀಪವಾಗಿರುತ್ತದೆ. ಸದರಿ ಗ್ರಾಮದ ಜನರ ಎಲ್ಲಾ ದಾಖಲೆಗಳಲ್ಲಿ  ಚಿಂಚೋಳಿ ತಾಲೂಕು ಎಂದೇ ನಮೂದಾಗಿವೆ. ಅಲ್ಲದೇ, ಚಂದನಕೇರಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ 75% ಪ್ರತಿಶತದಷ್ಟು ಜನರು ಚಿಂಚೋಳಿ ತಾಲೂಕಿನಲ್ಲಿಯೇ ಇರಲು ಹಾಗೂ ಅದನ್ನೇ ತಾಲೂಕಾಗಿ ಮುಂದುವರಿಯುವುದನ್ನು ಬಯಸಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಈ ಸಂದರ್ಭದಲ್ಲಿ ವಿಠ್ಠಲ ಮಂಗಲಗಿ, ಕಾಶಿನಾಥ ಮೆಲಕೇರಿ ಪೂಣಿ, ರಾಜಕುಮಾರ, ಆಕಾಶ ಮದನ, ಅಂಬರೀಷ ನಾಗೂರ, ಜಗದೇವಿ ಬಸವರಾಜ, ಮಲ್ಲಿಕಾರ್ಜುನ ಮುಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News