ವಿಶ್ವಗುರುವಾಗಲು ಆರ್ಥಿಕ ನೀತಿಯಷ್ಟೇ ಅಲ್ಲ, ಜ್ಞಾನ ಸಂಪತ್ತಿನ ಅವಶ್ಯಕತೆಯಿದೆ: ಸಚಿವ ಪ್ರಿಯಾಂಕ್ ಖರ್ಗೆ
"ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬಿತ್ತುವುದು ಅಗತ್ಯ"
ಕಲಬುರಗಿ: ನಮ್ಮ ದೇಶ ಇಡೀ ಜಗತ್ತಿಗೆ ವಿಶ್ವ ಗುರುವಾಗಬೇಕಾದರೆ ಕೇವಲ ಆರ್ಥಿಕ ನೀತಿಯನ್ನು ರೂಪಿಸಿದರೆ ಮಾತ್ರ ಸಾಲದು, ಬದಲಾಗಿ ಜ್ಞಾನದ ಸಂಪತ್ತನ್ನು ಹೊಂದುವ ಅವಶ್ಯಕತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
2024-25 ಮತ್ತು 2025-26ನೇ ಸಾಲಿನ ಕೆಕೆಆರ್ ಡಿಬಿ ಮ್ಯಾಕ್ರೋ ಯೋಜನೆಯಡಿಯಲ್ಲಿ ನವೀಕರಣಗೊಂಡ ಎಸ್.ಎಂ ಪಂಡಿತ್ ರಂಗಮಂದಿರವನ್ನು ಲೋಕಾರ್ಪಣೆ ಮಾಡಿದ ಬಳಿಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶ ಎಲ್ಲರಕ್ಕಿಂತ ನಂಬರ್ ಒನ್ ಆಗಬೇಕಾದರೆ, ಜ್ಞಾನದ ಸಮಾಜವನ್ನು ನಿರ್ಮಿಸಬೇಕಾಗುತ್ತದೆ. ವಿದೇಶಕ್ಕೆ ಹೋದಾಗ ಹೈದ್ರಾಬಾದ್ ಗೆ ಬನ್ನಿ ಎಂದು ಹೇಳಿಕೊಂಡು ಬಂಡವಾಳವನ್ನು ಆಕರ್ಷಿಸುತ್ತಾರೆ. ಆದರೆ ನಾವು ಕರ್ನಾಟಕಕ್ಕೆ ಬನ್ನಿ ಎಂದು ಹೇಳಿಲ್ಲ. ನಾನು ಅಲ್ಲಿ ಪ್ರಸೆಂಟೇಷನ್ ಮಾಡಿ ಜ್ಞಾನ ಮತ್ತು ಕೌಶಲ್ಯದ ಗುಣಗಳನ್ನು ಹೊಂದಿದ್ದೇವೆ ಎಂದು ಹೇಳಿದ್ದೇನೆ. ನಮ್ಮ ರಾಜ್ಯ ಜ್ಞಾನ ಹಾಗೂ ಕೌಶಲ್ಯದ ರಾಜಧಾನಿಯಾಗಿ ಮುನ್ನುಗ್ಗುತ್ತಿರುವುದರಿಂದ ಹಲವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ ಎಂದರು.
ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಹ ಪ್ರಶ್ನೆ ಕೇಳುವಂತಹ ಮನೋಭಾವ ಅವರಲ್ಲಿ ಮೂಡಿಸಬೇಕು. ಪುರಾಣಗಳು ಸಾಂಸ್ಕೃತಿಕ ಗುರುತಿನ ಪ್ರತೀಕಗಳಾಗಿವೆ. ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳ ಬೆಳವಣಿಗೆಗೆ ಪುರಾಣಗಳು ಬೇಕು. ಆದರೆ, ಪುರಾಣಗಳನ್ನು ಇತಿಹಾಸಗಳೆಂದು ಹಾಗೂ ವಿಜ್ಞಾನವೆಂದು ತಪ್ಪಾಗಿ ಆರ್ಥೈಸಲಾಗುತ್ತಿದೆ. ಬದಲಿಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು ಎಂದು ಹೇಳಿದರು.
ದೇಶದಲ್ಲಿ ಇಂದು ಅಣುಶಕ್ತಿ, ವೈಜ್ಞಾನಿಕ ಮನೋಭಾವನೆ ಚರ್ಚೆ ಆಗುತ್ತಿಲ್ಲ, ರಾಜಕಾರಣಿಗಳಿಗೆ ನೀತಿ ಮಾಡುವ ಶಕ್ತಿ ಇದೆ, ಆದರೆ ಇಡೀ ಪೀಳಿಗೆಗೆ ಆಲೋಚನೆ ನೀಡುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಹಾಗಾಗಿ ಮಕ್ಕಳ ಭವಿಷ್ಯಕ್ಕಾಗಿ ಅವರಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸುವ ಮೂಲಕ ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಪಣತೊಡಬೇಕಿದೆ. ಹಿಂದೆ ಬಂದಿರುವ ಪರೀಕ್ಷಾ ಫಲಿತಾಂಶಗಳ ಕಳಂಕಗಳನ್ನು ಮುಂಬರುವ ದಿನಗಳಲ್ಲಿ ಅಳಿಸಬೇಕಾಗಿದೆ. ಫಲಿತಾಂಶ ಸುಧಾರಣೆಗೆ ಶಿಕ್ಷಕರ ಜೊತೆಗೆ ನಾವೆಲ್ಲರೂ ಕೆಲಸ ಮಾಡಲಿದ್ದೇವೆ ಎಂದರು.
2024-25. ಸಾಲಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರ ಶಾಲೆಯ ಮೂವರು ವಿದ್ಯಾರ್ಥಿಗಳಾದ ನೀಲಮ್ಮ, ಶಿವಕುಮಾರ ಹಾಗೂ ಸಂಪತ್ ಕುಮಾರ್ ಅವರಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಇದೇ ವೇಳೆಯಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 23 ಶಿಕ್ಷಕರಿಗೆ ಸನ್ಮಾನ ನೆರವೇರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಬಿ.ಜಿ.ಪಾಟೀಲ್, ಮಹಾನಗರ ಪಾಲಿಕೆ ಮಹಾಪೌರ ವರ್ಷಾ ರಾಜೀವ್ ಜಾನೆ, ಕುಡಾ ಅಧ್ಯಕ್ಷ ಮಝಹರ್ ಆಲಂಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ, ಕೆಕೆಆರ್ ಟಿಸಿ ನಿರ್ದೇಶಕಿ ಬಿ.ಸುಶೀಲಾ, ಕೆಕೆಆರ್‌ಡಿಬಿ ಕಾರ್ಯದರ್ಶಿ ನಳಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಸೇರಿದಂತೆ ಮತ್ತಿತರಿದ್ದರು.
ಕಲಬುರಗಿ ಡಿಡಿಪಿಐ ಸೂರ್ಯಕಾಂತ ಮದಾನೆ, ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಅವರು ಸ್ವಾಗತಿಸಿದರು.