×
Ad

ದೇಶದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಮತಗಳ್ಳತನ ನಡೆಯುತ್ತಿದೆ : ಶಾಸಕ ಅಲ್ಲಮಪ್ರಭು ಪಾಟೀಲ್

Update: 2025-10-14 21:05 IST

ಕಲಬುರಗಿ : ದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಮತಗಳ್ಳತನ ನಡೆಯುತ್ತಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾ ಕಾಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ 'ವೋಟ್ ಚೋರ್ ಗದ್ದಿ ಛೋಡೋ' ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ನಾವು ಮತ ಹಾಕಿದ ಪಕ್ಷ ಯಾಕೆ ಗೆಲವು ಸಾಧಿಸುತ್ತಿಲ್ಲ ಎಂದು ಜನರೇ ಚರ್ಚಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹಾಗೂ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಆಳಂದ ಕ್ಷೇತ್ರದಲ್ಲಿ ಮತ ಕಳ್ಳತನಕ್ಕೆ ಯತ್ನಿಸಲಾಗಿದೆ ಎಂದರು.

ದೇಶದಲ್ಲಿ ವೋಟ್ ಚೋರಿ ಆಗುತ್ತಿರುವ ಪ್ರಯತ್ನಗಳನ್ನು ಕಾಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಪತ್ತೆ ಮಾಡಿದರು. ಬಳಿಕ ದೇಶದ ಹಲವೆಡೆ ಇಂಥ ಪ್ರಯತ್ನಗಳ ಮೂಲಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವುದು ಪತ್ತೆಯಾಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಇವಿಎಂ ಬದಲಿಗೆ ಬ್ಯಾಲೇಟ್ ಪೇಪರ್ ಬಳಸಬೇಕು ಎಂದು ಆಗ್ರಹಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆಯಂತೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಪ್ರತಿ ಕ್ಷೇತ್ರದಲ್ಲಿ 20 ಸಾವಿರ ಸಹಿ ಸಂಗ್ರಹ ಗುರಿ ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್‌ ವರ್ಷಾ ಜಾನೆ, ಉಪಮೇಯ‌ರ್ ತೃಪ್ತಿ ಲಾಖೆ, ರಾಜಗೋಪಾಲರೆಡ್ಡಿ, ಲಾಲ ಅಹ್ಮದ್ ಬಾಂಬೆಸೇಠ, ಶಕೀಲ ಸರಡಗಿ, ಶಿವಾನಂದ ಹೊನಗುಂಟಿ, ಲಿಂಗರಾಜ ತಾರಫೈಲ್, ಪರಶುರಾಮ ನಾಟೀಕಾರ, ದಶರಥಬಾಬು ವಂಟಿ, ರೇಣುಕಾ ಸಿಂಗೆ, ವಾಣಿಶ್ರೀ ಸಗರಕರ್ ಸೇರಿದಂತೆ ಹಲವರು ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News