ವಾಡಿ: ಪಟ್ಟಣದ ಎಸಿಸಿ ಅದಾನಿ ಕಂಪನಿಯ ಎಎಫ್‌ಆರ್ (ಪರ್ಯಾಯ ಇಂಧನಗಳು ಮತ್ತು ಕಚ್ಚಾ ವಸ್ತುಗಳು) ಘಟಕವು ಸ್ಥಳೀಯರ ಆರೋಗ್ಯಕ್ಕೆ ಮಾರಕವಾಗಿದ್ದು, ಇದರ ವಿರುದ್ಧ ಸಾರ್ವಜನಿಕರು ಜಾಗೃತರಾಗಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಎಎಫ್‌ಆರ್ ಘಟಕವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ದಸಂಸ ವಾಡಿ ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ವಿವಿಧ ರಾಜ್ಯಗಳಿಂದ ತಿರಸ್ಕರಿಸಲಾದ ವಸ್ತುಗಳು ಹಾಗೂ ರಾಸಾಯನಿಕ ಪದಾರ್ಥಗಳನ್ನು ಕಾರ್ಖಾನೆಗೆ ತಂದು ಸುಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಇದರಿಂದ ಸ್ಥಳೀಯ ನಿವಾಸಿಗಳು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ ಮಾತನಾಡಿ, ಎಸಿಸಿ ಅದಾನಿ ಸಿಮೆಂಟ್ ಕಾರ್ಖಾನೆಯ ಗಣಿಗಾರಿಕೆ ಸ್ಪೋಟಗಳಿಂದ ಹಾಗೂ ಅನುಮತಿಗಿಂತ ಹೆಚ್ಚಾಗಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಭೂ ಕುಸಿತ ಉಂಟಾಗಿ ಹಲವು ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಆರೋಪಿಸಿದರು. ಇದಕ್ಕೆ ಕಂಪನಿಯೇ ಹೊಣೆ ಹೊತ್ತು ಭಾರಿ ಪ್ರಮಾಣದ ಸ್ಪೋಟಕ ಬಳಕೆಯನ್ನು ನಿಲ್ಲಿಸಬೇಕು ಹಾಗೂ ಎಎಫ್‌ಆರ್ ಘಟಕವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಎಸಿಸಿ ಕಾಲೋನಿಯ ಕಾಕಾ ಚೌಕ್ ಗೇಟ್ ತೆರೆಯುವ ಮೂಲಕ ಸ್ಥಳೀಯ ಸಾರ್ವಜನಿಕರ ಸಂಚಾರ ಮತ್ತು ವ್ಯವಹಾರಗಳಿಗೆ ಅವಕಾಶ ನೀಡಬೇಕು. ಜೊತೆಗೆ ಪಟ್ಟಣದ ಜನರಿಗೆ ವಾಯುವಿಹಾರಕ್ಕೆ ಉದ್ಯಾನವನ ಹಾಗೂ ಯುವಕರಿಗೆ ಕ್ರೀಡಾಂಗಣದ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ದಸಂಸ ತಾಲೂಕು ಸಂಚಾಲಕ ಶಿವಮೂರ್ತಿ ಪಾಮನೂರ, ಹಿರಿಯ ಮುಖಂಡರಾದ ಮಲ್ಲಣ್ಣ ಮಸ್ಕಿ, ದಸಂಸ ಸ್ಥಳೀಯ ಅಂಚಾಲಕ ಸಾಬಣ್ಣ ಚಿತ್ತಾಪುರಕರ, ಪದಾಧಿಕಾರಿಗಳಾದ ಬಸವರಾಜ ಪ್ರಭು, ಶರಣು ದೊರೆ, ದೇವರಾಜ ಮಡಿವಾಳ, ರಾಕೇಶ ಮಹಾದೇವ, ವಾಷಿಮ್ ಅಕ್ರಂ, ಶೇಖ್ ನಿಸಾರ, ರೋಕೇಶ. ಎಂ, ಕಿರಣ ನಾಟೇಕರ, ಕಾಶಿನಾಥ ಕಟ್ಟಿ, ದಿನೇಶ ಮುತ್ತಕೊಡ, ರಘುವೀರ ಕಟ್ಟಿ, ರವಿಚಂದ್ರ ಭೀಮರಾಯ ಕೊಂಚೂರ, ನವಾಬ್ ಮಿನ್ಸಿ, ಸುಭಾಷ ಕಲ್ಮಾರಿ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor