ಮಾದಕ ವಸ್ತುಗಳ ಹಾವಳಿ ತಡೆಗೆ ಯುವಕರು ಪೊಲೀಸರಿಗೆ ನೆರವಾಗಬೇಕು: ಪೊಲೀಸ್ ಆಯುಕ್ತ ಶರಣಪ್ಪ
ಕಲಬುರಗಿ: ಮಾದಕ ವಸ್ತುಗಳ ಅಕ್ರಮ ಸಾಗಾಟ ಮತ್ತು ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು, ವಿಶೇಷವಾಗಿ ಯುವಕರು ಜಾಗೃತರಾಗಬೇಕು. ತಮ್ಮ ಸುತ್ತಮುತ್ತ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಸಮಾಜವನ್ನು ಮಾದಕ ವ್ಯಸನದ ಕಪಿಮುಷ್ಟಿಯಿಂದ ರಕ್ಷಿಸುವಲ್ಲಿ ಪೊಲೀಸರ ಶಕ್ತಿವರ್ಧಕರಾಗಿ ಕಾರ್ಯನಿರ್ವಹಿಸಬೇಕು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಕರೆ ನೀಡಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯ ಹಾಗೂ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ "ಅಂತರರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ" ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟುವ ಜವಾಬ್ದಾರಿ ಕೇವಲ ಪೊಲೀಸ್ ಇಲಾಖೆ ಅಥವಾ ಭದ್ರತಾ ಸಂಸ್ಥೆಗಳದ್ದಲ್ಲ. ಸಮಾಜದ ಎಲ್ಲ ವರ್ಗದ ಜನರು, ವಿಶೇಷವಾಗಿ ಯುವಜನತೆ, ಅಕ್ರಮ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟದ ಬಗ್ಗೆ ನಿಗಾ ವಹಿಸಿ, ಅಂತಹ ಪ್ರಕರಣಗಳ ಮಾಹಿತಿ ಪೊಲೀಸರಿಗೆ ನೀಡುವ ಮೂಲಕ ಈ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
"ನಿಮ್ಮ ಸುತ್ತಮುತ್ತ ಯಾವುದೇ ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ. ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ" ಎಂದು ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ದೇಶದ ಭವಿಷ್ಯ ರೂಪಿಸುವ 18ರಿಂದ 35 ವರ್ಷದೊಳಗಿನ ಯುವಕರು ಹೆಚ್ಚಿನ ಪ್ರಮಾಣದಲ್ಲಿ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ವಯಸ್ಸಿನಲ್ಲಿ ತಮ್ಮ ಪ್ರತಿಭೆ ಮತ್ತು ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಬೇಕಾದ ಯುವಕರು ವ್ಯಸನದ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಶರಣಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತ ಯಲ್ಲಂದೂರು ಶಾಲು ಮಾತನಾಡಿದರು. ಬಳಿಕ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅಂತರರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಲಕ್ಷ್ಮೀ ಪಾಟೀಲ ಮಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್. ಹೊನ್ನಳ್ಳಿ, ಡೀನ್ ಡಾ. ಶಿವಕುಮಾರ ಜವಳಿಗಿ ಸೇರಿದಂತೆ ಹಲವು ಗಣ್ಯರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.