×
Ad

ಕಾಸರಗೋಡು: ಸಂಘರ್ಷಕ್ಕೆ ಕಾರಣವಾದ ಭೂಸ್ವಾಧೀನ ಪ್ರಕ್ರಿಯೆ; ಮನೆ ತೆರವಿಗೆ ಬಂದ ರಾ.ಹೆ ಪ್ರಾಧಿಕಾರದ ಅಧಿಕಾರಿಗಳ ಮುಂದೆ ಆತ್ಮಹತ್ಯೆ ಬೆದರಿಕೆ

Update: 2025-11-04 12:09 IST

ಕಾಸರಗೋಡು: ಜಿಲ್ಲೆಯಲ್ಲಿ  ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿಗಾಗಿ ಭೂಸ್ವಾದೀನ ಪ್ರಕ್ರಿಯೆ ಹಿನ್ನಲೆಯಲ್ಲಿ ಮನೆಯನ್ನು ಕೆಡವಲು ಮುಂದಾದಾಗ ಮನೆ ಮಾಲಕ ಹಾಗೂ ಕುಟುಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಸಂಘರ್ಷದ ವಾತಾವರಣ ಸೃಷ್ಟಿಯಾದ ಘಟನೆ ಚೆರ್ಕಳ ಸಮೀಪದ ಬೇವಿಂಜೆಯ ತೆಕ್ಕಿಲ್‌ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

 "ಆರು ತಿಂಗಳ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರೂ, ಯಾವುದೇ ಅಧಿಕೃತ ಸೂಚನೆ ನೀಡಿಲ್ಲ ಮತ್ತು ಅಧಿಕಾರಿಗಳು ಯಾವುದೇ ನಷ್ಟ ಪರಿಹಾರ ನೀಡಿಲ್ಲ. ಸರಿಯಾದ ಸೂಚನೆ ಮತ್ತು ನಷ್ಟ ಪರಿಹಾರ ನೀಡಿದರೆ, ನಾವು ತಕ್ಷಣ ಖಾಲಿ ಮಾಡುತ್ತೇವೆ. ಆದರೆ ಇಲ್ಲಿಯವರೆಗೆ ಏನನ್ನೂ ನೀಡಿಲ್ಲ. ಬದಲಾಗಿ, ನಿರ್ಮಾಣ ಕಂಪನಿಯು ಇಂದು ಇದ್ದಕ್ಕಿದ್ದಂತೆ ಕಾರ್ಯಾಚರಣೆ ಆರಂಭಿಸಿದೆ"  ಎಂದು ಮನೆ ಮಾಲಕ ಎಂ.ಟಿ ಬಶೀರ್ ದೂರಿದ್ದಾರೆ.

ಯೋಜನೆಯ ಪ್ರಕಾರ, ಬಶೀರ್ ಅವರ ಮನೆಯ ಮುಂಭಾಗದ ಕಂಬಗಳು ಮತ್ತು ಅಂಗಳವು ರಾಷ್ಟ್ರೀಯ ಹೆದ್ದಾರಿಯ ಗಡಿಯೊಳಗೆ ಬರುತ್ತವೆ. ಕೇರಳ ಹೈಕೋರ್ಟ್ ಈ ಹಿಂದೆ ಮನೆಯ ಮುಂಭಾಗವನ್ನು ಕೆಡಹುವ ಪ್ರಯತ್ನಕ್ಕೆ ತಡೆಯಾಜ್ಞೆ  ನೀಡಿತ್ತು.  ಅದರ ಅವಧಿ ರವಿವಾರಕ್ಕೆ ಮುಕ್ತಾಯಗೊಂಡಿದ್ದರಿಂದ ವಿದ್ಯಾನಗರ ಪೊಲೀಸರ ಸಹಾಯದೊಂದಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡ ಆಗಮಿಸಿತ್ತು. 

ಈ ವೇಳೆ ಮನೆ ಮಂದಿ ಅಧಿಕಾರಿಗಳು ಮನೆ ಕೆಡವಲು ಮುಂದಾದರೆ ಮನೆಯೊಳಗೆ ಇರಿಸಿದ್ದ ಅಡುಗೆ ಅನಿಲ ಸಿಲಿಂಡರ್ ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದ ಸ್ಥಳೀಯರು, ಈ ಪ್ರದೇಶದಲ್ಲಿ ಒಳ ರಸ್ತೆ ಅಥವಾ ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ಮಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊನೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತುಕತೆ ನಡೆಸಿ, ಮನೆಯ ಆವರಣ ಗೋಡೆಯ ಹೊರಗಿನಿನಿಂದಲೇ ರಸ್ತೆ ನಿರ್ಮಾಣದ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News