ಕಲಬುರಗಿ | ಸಾಧನೆ ಬಯಸಿದ್ದವರಿಗೆ ಕೆಲಸ ಚಿಕ್ಕದು, ದೊಡ್ಡದು ಎಂಬ ಭೇದವಿರಲ್ಲ: ಡಿಸಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ನೋಡಲ್ ಹಾಗೂ ಕಲಬುರಗಿ ಜಿಲ್ಲೆಯ ಸರಕಾರಿ ಹಾಗು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಕೌಶಲ್ಯ ಸ್ಪರ್ಧೆ ಹಾಗು ಕ್ರೀಡಾಕೂಟಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಉದ್ಘಾಟಿಸಿ ಮಾತನಾಡುತ್ತಾ, ಐ.ಟಿ.ಐ.ಕೋರ್ಸುಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಯಾವುದೇ ಕೆಲಸ ಚಿಕ್ಕದು ದೊಡ್ಡದಲ್ಲ, ಮನಸ್ಸಿಟ್ಟು ಮಾಡಿದರೆ ಎಂತಹ ಸಾಧನೆಯನ್ನು ಬೇಕಾದರು ಮಾಡಬಹುದೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಚಾರ್ಯರರಾದ ಮುರಳಿಧರ ರತ್ನಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಜಿಲ್ಲೆಯ ಸರಕಾರಿ ಹಾಗು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಪ್ರತೀ ವರ್ಷ ಜಿಲ್ಲಾ ಮಟ್ಟದ ಕ್ರೀಡೆ ಹಾಗು ಕೌಶಲ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಇಂತಹ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಪಾರಿತೋಷಕ ವಿತರಣೆಗೆ ಕೇಳಿಕೊಂಡಾಗ ತಮ್ಮ ಬಿಡುವಿಲ್ಲದ ಕೆಲಸದ ಜೊತೆಗೂ ನಮ್ಮ ಸಮಾರಂಭಕ್ಕೆ ಆಗಮಿಸಿ ನಮಗೆಲ್ಲರಿಗೂ ಸ್ಪೂರ್ತಿಯಾಗಿ ಐ.ಟಿ.ಐ. ಮಕ್ಕಳಿಗೆ ಹುರಿದುಂಬಿಸಿದ್ದಕ್ಕೆ ಈ ವೇದಿಕೆ ಮೂಲಕ ಅವರನ್ನು ಗೌರವಿಸುತ್ತೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಆಡಳಿತಾಧಿಕಾರಿ ಸುರೇಶ ವಗ್ಗೆ, ಉಪನಿರ್ದೇಶಕ ಡಾ.ರುಬಿನಾ ಪರ್ವೀನ, ಪ್ರಾಚಾರ್ಯ ಶಕೀಲ ಅನ್ಸಾರಿ ಸೇರಿದಂತೆ ಸಿಬ್ಬಂದಿಯವರು ಹಾಗೂ ತರಬೇತಿದಾರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ತರಬೇತಿ ಅಧಿಕಾರಿ ಭಾರತಿ ಮಹಾದೇವಪ್ಪ ಅವರು ಸ್ವಾಗತಿಸಿದರು. ಪಾರಿತೋಷಕ ವಿತರಣೆಯನ್ನು ಬಸನಗೌಡ ಪಾಟೀಲ ಅವರು ನಡೆಸಿಕೊಟ್ಟರು. ಲೋಕೇಶ ಬೇಲೂರ ವಂದಿಸಿದರು. ವಿಜಯಕುಮಾರ ಮೇಳಕುಂದಿ ನಿರೂಪಿಸಿದರು.