ಕನಕಗಿರಿ: ರೇಬೀಸ್ ವೈರಸ್‌ನಿಂದ ಹರಡುವ ರೇಬೀಸ್ ರೋಗ ಅತ್ಯಂತ ಮಾರಣಾಂತಿಕವಾಗಿದ್ದು, ಸಾರ್ವಜನಿಕರು ಹಾಗೂ ಸಾಕು ಪ್ರಾಣಿಗಳ ಮಾಲೀಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಶು ವೈದ್ಯಾಧಿಕಾರಿ ಡಾ. ಹೀನಾ ಫಾತಿಮಾ ಹೇಳಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರೇಬೀಸ್ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಸೋಂಕಿತ ನಾಯಿ, ಬೆಕ್ಕು ಅಥವಾ ಕೋತಿ ಕಚ್ಚಿದಾಗ ರೇಬೀಸ್ ವೈರಸ್ ಮನುಷ್ಯನ ದೇಹವನ್ನು ಪ್ರವೇಶಿಸಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಚಿಕಿತ್ಸೆ ವಿಳಂಬವಾದರೆ ಜೀವಹಾನಿಗೂ ಕಾರಣವಾಗಬಹುದು ಎಂದು ತಿಳಿಸಿದರು.
ಸಾಕು ಪ್ರಾಣಿಗಳಿಗೆ ಕಾಲಕಾಲಕ್ಕೆ ರೇಬೀಸ್ ಲಸಿಕೆ ಹಾಕಿಸುವುದು ಅತ್ಯಗತ್ಯ. ಯಾವುದೇ ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಸೋಪು ಮತ್ತು ಹರಿಯುವ ನೀರಿನಿಂದ ಚೆನ್ನಾಗಿ ತೊಳೆದು, ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ರೇಬೀಸ್ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಜರಂಗಬಲಿ ವಹಿಸಿದ್ದರು. ಯುವ ರೆಡ್ ಕ್ರಾಸ್ ಸಂಯೋಜಕಿ ಸರ್ವಮಂಗಳಮ್ಮ ಟಿ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಕ್ಷಿತ್ ಎ., ಸೋಮಶೇಖರ ಕಂಚಿ ಸೇರಿದಂತೆ ಬೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೇಘಾ ಪ್ರಾರ್ಥನೆ ಸಲ್ಲಿಸಿದರೆ, ಚೈತ್ರಾ ಸ್ವಾಗತಿಸಿದರು. ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.