ಕನಕಗಿರಿ | ಕೊಲೆ ಪ್ರಕರಣ : 20ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಸಾಂದರ್ಭಿಕ ಚಿತ್ರ
ಕನಕಗಿರಿ : ಕೊಲೆ ಮತ್ತು ಮರಣಾಂತಿಕ ಹಲ್ಲೆ ಪ್ರಕರಣದಲ್ಲಿ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪರಶುರಾಮ ಅಲಿಯಾಸ್ ರಾಮಣ್ಣ (49)ಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ. ದಂಡವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.
ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಈ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದ ವಿವರ :
2004ರ ಜ.15ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ, ದುರುಗಪ್ಪ ನಾಯಕ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಳಿಕ ಅಲ್ಲಿದ್ದ ಆರೋಪಿಯ ಪತ್ನಿಯ ಮೇಲೂ ಹೊಟ್ಟೆ ಭಾಗಕ್ಕೆ ಮರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ವೇಳೆ ಆರೋಪಿ ಪರಾರಿಯಾಗಿ, ಬೇರೆ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದನು. ದೀರ್ಘಕಾಲದ ಶೋಧದ ಬಳಿಕ 2025ರಲ್ಲಿ ಕನಕಗಿರಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಸರಕಾರದ ಪರವಾಗಿ ಅಭಿಯೋಜಕರಾದ ನಾಗಲಕ್ಷ್ಮಿ ವಾದ ಮಂಡಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.