Koppal | ಆಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಆಂಬುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆ: ತಾಯಿ, ಮಗು ಸುರಕ್ಷಿತ
ಕುಷ್ಟಗಿ: ಕೊಪ್ಪಳದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 108 ಆಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗಮಧ್ಯೆಯೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಂಬುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ.
ತಾಲೂಕಿನ ಚಿಕ್ಕತ್ತೆಮ್ಮಿನಾಳ ಗ್ರಾಮದ ಲಕ್ಷ್ಮಿ ಕನಕಪ್ಪ ಆಗೋಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಷ್ಟಗಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಪ್ಪಳದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದರು.
ಅದರಂತೆ 108 ಆಂಬುಲೆನ್ಸ್ನಲ್ಲಿ ಕೊಪ್ಪಳಕ್ಕೆ ಕರೆದೊಯ್ಯುತ್ತಿದ್ದಾಗ ಉಪ್ಪುಲ್ದಿನ್ನಿ ಕ್ರಾಸ್ ಬಳಿ ಗರ್ಭಿಣಿಗೆ ಹೆರಿಗೆ ನೋವು ತೀವ್ರಗೊಂಡಿದೆ. ಪರಿಸ್ಥಿತಿಯನ್ನು ಅರಿತ ಆಂಬುಲೆನ್ಸ್ನ ತುರ್ತು ವೈದ್ಯಕೀಯ ತಂತ್ರಜ್ಞ (ಇಎಂಟಿ) ಡಿ.ಕೆ. ಪಾಟೀಲ್ ಮತ್ತು ಚಾಲಕ (ಪೈಲಟ್) ಕಳಕಯ್ಯ ಅವರು ಸಮಯಪ್ರಜ್ಞೆಯಿಂದ ಆಂಬುಲೆನ್ಸ್ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಬಳಿಕ ತಾಯಿ ಮತ್ತು ನವಜಾತ ಗಂಡು ಮಗುವನ್ನು ಕೊಪ್ಪಳದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಸಮಯೋಚಿತವಾಗಿ ನೆರವಿಗೆ ಧಾವಿಸಿ ಹೆರಿಗೆ ಮಾಡಿಸಿದ 108 ಆಂಬುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.