ಕುಕನೂರು | ಕನಕದಾಸರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಲಿ: ಡಾ.ಎಚ್.ಡಿ.ಪಾಟೀಲ್
14 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ
ಕುಕನೂರು: ಕವಿ ಕನಕದಾಸರ ಜೀವನ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹಾಲುಮತ ಸಮಾಜದವರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಬೆಂಗಳೂರು ಲೋಕಸೇವಾ ಆಯೋಗದ ಮಾಜಿ ಸದಸ್ಯ ಡಾ.ಎಚ್.ಡಿ.ಪಾಟೀಲ್ ಭಟಪ್ಪನಹಳ್ಳಿ ಹೇಳಿದರು.
ಕುಕನೂರು ಪಟ್ಟಣದ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ಕುಕನೂರು ತಾಲೂಕು ಹಾಲುಮತ ಸಮಾಜದ ವತಿಯಿಂದ ಶ್ರೀ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕನಕದಾಸರ ಜಯಂತಿ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕುಕನೂರು ಪಟ್ಟಣದ ಹಾಲುಮತ ಸಮಾಜದವರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯವಾಗಿದೆ. ನವಜೀವನಕ್ಕೆ ಕಾಲಿಡುತ್ತಿರುವ ನವದಂಪತಿಗಳು ಸುಖ, ಸಂತೋಷದಿಂದ ಬಾಳಲಿ ಎಂದು ಅವರು ಆಶೀರ್ವದಿಸಿದರು.
ನಂತರ ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಎಂ.ಎಸ್. ಹಿರೇಮಠ ಮಾತನಾಡಿ, ಕನಕದಾಸರ ಸಾಹಿತ್ಯ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾರಿದೀಪವಾಗಿವೆ. ಆ ಕಾಲದಲ್ಲಿಯೇ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣರಾಗಿದ್ದಾರೆ. ಕವಿಯಾಗಿ, ಸಂಗೀತಗಾರರಾಗಿ ಸಂಚಾರಿ ಜೀವನ ನಡೆಸಿದ ಅವರು ತಮ್ಮ ಜೀವನವನ್ನು ಭಕ್ತಿಯಿಂದ ಸಾರ್ಥಕಗೊಳಿಸಿಕೊಂಡ ಮಹಾನುಭಾವರು. ಕನಕದಾಸರ ಆದರ್ಶ ಹಾಗೂ ತತ್ವಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು. ಶ್ರೀ ಕನಕದಾಸರ ಭಾವಚಿತ್ರದೊಂದಿಗೆ ಕುಕನೂರಿನ ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭಾಜಾ-ಭಜಂತ್ರಿಗಳ ಸದ್ದು ಮೊಳಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಕನೂರಿನ ಶ್ರೀ ಆತ್ಮಾನಂದ ಭಾರತಿ ಮಹಾಸ್ವಾಮಿಗಳು, ವಿರುಪಾಕ್ಷಯ್ಯ ಗುರುವಿನಮಠ, ಶ್ರೀ ಮಂಜುನಾಥಯ್ಯ ಗುರುವಿನಮಠ, ಶ್ರೀ ದೊಡ್ಡಯ್ಯ ಗುರುವಿನಮಠ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ್ ಕಡೇಮನಿ, ಸಮಾಜಸೇವಕ ಶಿವಣ್ಣ ರಾಯರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗಂಗಮ್ಮ ಗುಳಗಣ್ಣನವರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮುಧೋಳ್, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಶೇಖಪ್ಪ ಕಂಬಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಬಜಂತ್ರಿ, ಗ್ರೇಡ್-2 ತಹಶೀಲ್ದಾರ್ ಮುರುಳಿಧರ್ ಕುಲಕರ್ಣಿ, ಉದ್ಯಮಿ ಅನಿಲ್ ಆಚಾರ್, ಶ್ರೀನಿವಾಸ್ ನಿಂಗಾಪುರ್, ಶರಣಪ್ಪ ಕೊಪ್ಪದ್, ಸಂಗಪ್ಪ ಕೊಪ್ಪದ್, ಲಕ್ಷ್ಮಣ ಬೆದವಟ್ಟಿ ಸೇರಿದಂತೆ ಹಾಲುಮತ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಇತರರು ಉಪಸ್ಥಿತರಿದ್ದರು.