ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ: ಅರ್ಜಿ ಸಲ್ಲಿಕೆಗೆ ಜು.8ರ ವರೆಗೆ ಅವಕಾಶ
ಬೆಂಗಳೂರು: ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಆನ್‍ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಯ ದಿನಾಂಕವನ್ನು ಜು.8ರ ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ತಿದ್ದುಪಡಿ ಮಾಡಲು ಜು.9 ರಿಂದ ಜು.12ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಆನ್‍ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಸ್ತುತ ಚಾಲ್ತಿಯಲ್ಲಿದ್ದು, ಅರ್ಜಿ ಸಲ್ಲಿಸಲು ಜು.3 ಮತ್ತು ಅರ್ಜಿ ಶುಲ್ಕ ಪಾವತಿಸಲು ಜು.4ಕೊನೆಯ ದಿನಾಂಕವಾಗಿತ್ತು.
ತಾಂತ್ರಿಕ ಸಮಸ್ಯೆಗಳು, ಪ್ರಮಾಣ ಪತ್ರಗಳನ್ನು ಪಡೆಯಲು ವಿಳಂಬ ಹಾಗೂ ಇತರೆ ಅನೇಕ ಕಾರಣಗಳಿಂದ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಲ್ಲಿಸಿದ ಅರ್ಜಿಗಳಲ್ಲಿ ತಪ್ಪಾದ ಮಾಹಿತಿಗಳನ್ನು ನಮೂದಿಸಿದ ಹಿನ್ನಲೆಯಲ್ಲಿ, ಅರ್ಜಿಗಳಲ್ಲಿನ ವಿವರಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡಬೇಕು ಎಂದು ಕೆಲವು ಅಭ್ಯರ್ಥಿಗಳು ಮನವಿ ಮಾಡಿದ್ದರು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸಿರುವ ಯುವಕರ ಭವಿಷ್ಯದ ದೃಷ್ಟಿಯಿಂದ, ಅರ್ಹ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ 3,395 ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ 596 ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಯೋಗದಲ್ಲಿ ನೇಮಕಾತಿ ನಡೆಸಲಾಗುತ್ತಿದೆ. ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಈಗಾಗಲೇ 2,80,216 ಅರ್ಜಿಗಳು ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ 59,309 ಅರ್ಜಿಗಳು ಸಲ್ಲಿಕೆಯಾಗಿವೆ.