ಮಂಡ್ಯ | ಎಂಟು ಮನೆಗಳ್ಳತನ ಆರೋಪಿಗಳ ಬಂಧನ ; 83 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಮಂಡ್ಯ: ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳ್ಳತನ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ನಗದು ಸೇರಿದಂತೆ 83 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ಠಾಣೆ, ಶ್ರೀರಂಗಪಟ್ಟಣ, ಮೈಸೂರಿನ ವಿವಿ ಪುರಂ, ಮೈಸೂರು ಜಿಲ್ಲೆ ದಕ್ಷಿಣ ಹಾಗೂ ಕೆ.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳವು ನಡೆದಿದ್ದು, ಆರೋಪಿಗಳಿಂದ 1 ಕೆಜಿ 486 ಗ್ರಾಂ ತೂಕದ ಚಿನ್ನಾಭರಣ, 37 ಗ್ರಾಂ ತೂಕದ ಬೆಳ್ಳಿ ಒಡವೆ ಹಾಗೂ 1.7 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಜನವರಿ 18ರಂದು ಮದ್ದೂರು ಪಟ್ಟಣದ ಕೆ.ಚ್.ನಗರ ನಿವಾಸಿ ಡಾ.ಚಂದ್ರು ಮನೆಯವರು ಕುಟುಂಬ ಸಮೇತ ಹೊರಗಡೆ ಹೋಗಿದ್ದಾಗ, ಬಾಗಿಲು ಮುರಿದು ಒಂದು ಕೆ.ಜಿ.ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗರದ ಕಳವು ಮಾಡಲಾಗಿದೆ ಎಂದು ಮದ್ದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇತರೆ ಠಾಣೆಗಳ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ವಿವರಿಸಿದರು.
ಈ ಪ್ರಕರಣವನ್ನು ಎಎಸ್ಪಿ ಸಿ.ಇ.ತಿಮ್ಮಯ್ಯ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ಮದ್ದೂರು ಠಾಣೆಯ ಪಿಐಗಳಾದ ಪ್ರಸಾದ್ ಕೆ.ಆರ್., ಎಂ.ಶಿವಕುಮಾರ್, ಸಿಪಿಐ ವೆಂಕಟೇಗೌಡ, ಪಿಎಸ್ಸೈಗಳಾದ ಮಂಜುನಾಥ ಕೆ., ರವಿ ಪಿ., ಮಲ್ಲಪ್ಪ, ಇತರ ಸಿಬ್ಬಂದಿಗಳ ತಂಡ ಈ ಕಳವು ಪ್ರಕರಣವನ್ನು ಬೇಧಿಸಿದ್ದಾರೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.