ಫೆ.7 ‘ಮಂಡ್ಯ ಬಂದ್’ ತಾತ್ಕಾಲಿಕವಾಗಿ ಹಿಂಪಡೆದ ಸಮಾನ ಮನಸ್ಕರ ವೇದಿಕೆ
ಮಂಡ್ಯ: ತಾಲೂಕಿನ ಕೆರಗೋಡು ಧ್ವಜ ವಿವಾದ ಸಂಬಂಧ ಜಿಲ್ಲೆಯ ಸೌಹಾರ್ದ ಪರಂಪರೆ ಉಳಿವಿಗಾಗಿ ಪ್ರಗತಿಪರ ಸಂಘಟನೆಗಳನ್ನೊಳಗೊಂಡ ಸಮಾನ ಮನಸ್ಕರ ವೇದಿಕೆಯು ಫೆ.7ರಂದು ಕರೆ ನೀಡಿದ್ದ ‘ಮಂಡ್ಯ ಬಂದ್’ ಘೋಷಣೆಯನ್ನು ಹಿಂದಕ್ಕೆ ಪಡೆದಿದೆ.
ಕೆರಗೋಡು ಹನುಮಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್‌ಗೆ ಕರೆ ಕೊಟ್ಟಿದ್ದು, ಸಮಾನ ಮನಸ್ಕರ ವೇದಿಕೆ 7ಕ್ಕೆ ಬಂದ್‌ಗೆ ಕರೆ ನೀಡಿತ್ತು. ಸೋಮವಾರ ಎರಡು ಸಂಘಟನೆಗಳ ಮುಖಂಡರ ಜತೆ ಜಿಲ್ಲಾಧಿಕಾರಿಗಳು ಸಂಧಾನ ಸಭೆ ನಡೆಸಿ ಬಂದ್ ಹಿಂಪಡೆಯಲು ಮನವಿ ಮಾಡಿದ್ದರು.
ಮಂಡ್ಯ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಸಭೆ ನಡೆಸಿ, ಬಂದ್‌ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ, ಜನಸಾಮಾನ್ಯರಿಗೂ ತೊಂದರೆಯಾಗುತ್ತೆ. ಹೀಗಾಗಿ ಸಂಘಟನೆಗಳು ಬಂದ್ ಹಿಂಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿತ್ತು.
ಜಿಲ್ಲಾಡಳಿತದ ಮನವಿ ಮೇರೆಗೆ ತಾತ್ಕಾಲಿಕವಾಗಿ ಫೆ.7ರ ಮಂಡ್ಯ ಬಂದ್ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ. ಫೆ.9ರ ಬಂದ್‌ಗೂ ಅವಕಾಶ ಕೊಡಬೇಡಿ ಎಂದು ಕೋರಿದ್ದೇವೆ. ಒಂದು ವೇಳೆ ಅಂದು ಬಂದ್ ನಡೆಸಿದರೆ ನಾವು ಮತ್ತೆ ಬಂದ್‌ಗೆ ಕರೆ ನೀಡುತ್ತೇವೆ ಎಂದು ಸಮಾನ ಮನಸ್ಕರ ವೇದಿಕೆ ಮುಖಂಡ ಎಂ.ಬಿ.ನಾಗಣ್ಣಗೌಡ ಎಚ್ಚರಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.