ಮಂಡ್ಯ| ಭರ್ತಿಯತ್ತ ಕೆಆರ್‌ಎಸ್ ಜಲಾಶಯ: ನದಿಗೆ ನೀರು ಬಿಡುಗಡೆ
ಮಂಡ್ಯ: ಜಲಾಶಯದ ನೀರಿನಮಟ್ಟ ಶನಿವಾರ ಸಂಜೆ ವೇಳೆಗೆ 121.40 ಅಡಿ ತಲುಪಿದ್ದು, (ಗರಿಷ್ಠಮಟ್ಟ 124.80 ಅಡಿ) ಭರ್ತಿಗೆ ಕೇವಲ ಎರಡು 2 ಅಡಿ ಮಾತ್ರ ಬಾಕಿ ಇದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸ್ವಲ್ಪ ತಗ್ಗಿದ್ದರೂ ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಕೆಆರ್‌ಎಸ್ ಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಜಲಾಶಯಕ್ಕೆ 60,224 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ನಾಲೆಗಳು ಸೇರಿದಂತೆ ಕಾವೇರಿ ನದಿಗೆ 17,795 ನೀರನ್ನು ಬಿಡುಗಡೆ ಮಾಡಲಾಗಿದೆ. ತಡರಾತ್ರಿ ನಂತರ ಹೊರಹರಿವಿನ ಪ್ರಮಾಣ ಹೆಚ್ಚಾಗಲಿದ್ದು, ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಪರಿಶೀಲನೆ:
ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇತರೆ ಅಧಿಕಾರಗಳ ಜತೆ ನದಿತೀರದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗೊಳ ಬಳಿ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಭಂ ಭಂ ಆಶ್ರಮದಲ್ಲಿ ಇರುವವರನ್ನು ಸಂಪರ್ಕಿಸಿ ನಡುಗಡ್ಡೆಯಿಂದ ಹೊರಕ್ಕೆ ಬರುವಂತೆ ತಿಳಿಸಿದರು.
ಕಾರೇಕುರ ಬಳಿಗೆ ತೆರಳಿದ ಅಧಿಕಾರಿಗಳು ನದಿಯ ತೀರಕ್ಕೆ ಹೋಗದಂತೆ ರೈತರಿಗೆ ಸೂಚಿಸಿದರು. ಶ್ರೀರಂಗಪಟ್ಟಣ ಸಮೀಪದ ಪಶ್ಚಿಮವಾಹಿನಿ ತಾಣಕ್ಕೂ ಭೇಟಿ ನೀಡಿದ ಅಧಿಕಾರಿಗಳ ತಂಡ, ನದಿ ದಡದಲ್ಲಿರುವ ದೇವಾಲಯ ಮತ್ತು ಮನೆಗಳ ಬಗ್ಗೆ ಮಾಹಿತಿ ಪಡೆಯಿತು. ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಇತರ ಕಾರ್ಯಗಳನ್ನು ಪ್ರವಾಹ ಪರಿಸ್ಥಿತಿ ತಗ್ಗುವವರೆಗೆ ಸ್ಥಗಿತಗೊಳಿಸುವಂತೆ ಸೂಚಿಸಿತು.
ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಸ್ಥಳದಲ್ಲೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಪ್ರವಾಹ ಮುನ್ನೆಚ್ಚರಿಕೆ
ಕೃಷ್ಣರಾಜಸಾಗರ ಜಲಾಶಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲಾಧಯ್ಕಕೆ ಹೆಚ್ಚಿನ ನೀರು ಹರಿದುಬರುತ್ತಿದ್ದು, ಜಲಾಶಯದಿಂದ ಸುಮಾರು 15 ಸಾವಿರದಿಂದ 35 ಸಾವಿರ ಕ್ಯೀಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು ಹಾಗೂ ಈ ಪ್ರಮಾಣವು ಹೆಚ್ಚಾಗುವ ಸಂಭವವಿರುತ್ತದೆ. ಆದ್ದರಿಂದ ಕಾವೇರಿನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆವಹಿಸಿ ಸೂಕ್ತ ಮುಂಜಾಗ್ರತೆ ಕೈಗೊಂಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಕೋರಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ಕೃಷ್ಣರಾಜಸಾಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.