ಮಂಡ್ಯ: ದುಷ್ಕರ್ಮಿಗಳ ತಂಡದಿಂದ ಯುವಕನ ಕೊಲೆ; ಪ್ರಕರಣ ದಾಖಲು
ಅಕ್ಷಯ್
ಮಂಡ್ಯ: ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಅಕ್ಷಯ್ (24) ಹತ್ಯೆಯಾದ ಯುವಕ. ಆತನ ಸ್ನೇಹಿತ ಹೇಮಂತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಚೀಟಿ ವ್ಯವಹಾರದ ಹಿನ್ನಲೆಯಲ್ಲಿ ಅಕ್ಷಯ್ ಹಾಗೂ ಆತನ ಸ್ನೇಹಿತನ ಮಧ್ಯೆ ಗಲಾಟೆ ನಡೆದಿದ್ದು, ಆ ಸಂದರ್ಭದಲ್ಲಿ ಅಕ್ಷಯ್ ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದ್ವೇಷದ ಹಿನ್ನಲೆಯಲ್ಲಿ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಅಕ್ಷಯನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಮಂಡ್ಯ ಪಶ್ಚಿಮ ಠಾಣೆಯ ಸಬ್ ಇನ್ಸೆಕ್ಟರ್ ಶೇಷಾದ್ರಿ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.