×
Ad

ಪೆನ್‍ಡ್ರೈವ್ ಹಂಚಿಕೆಯಲ್ಲಿ ಬಿಜೆಪಿ ಮಾಜಿ ಶಾಸಕನ ಕೈವಾಡ ; ಶಾಸಕ ರವಿಕುಮಾರ್ ಗಣಿಗ ಆರೋಪ

Update: 2024-05-07 23:12 IST

ಮಂಡ್ಯ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಆರೋಪದ ಪೆನ್‍ಡ್ರೈವ್ ಹಂಚಿಕೆಯಲ್ಲಿ ಹಾಸನದ ಬಿಜೆಪಿಯ ಮಾಜಿ ಶಾಸಕರೊಬ್ಬರ ಕೈವಾಡ ಇದೆ ಎಂದು ಇಲ್ಲಿನ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಆರೋಪಿಸಿದ್ದಾರೆ.

ಪೆನ್‍ಡ್ರೈವ್ ಹಂಚಿಕೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ವಿಷಯಕ್ಕೆ ಸಂಬಂಧಿಸಿದಂತೆ ರವಿಕುಮಾರ್ ಮಾಧ್ಯಮಗಳಿಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಬಿಜೆಪಿ ಮಾಜಿ ಶಾಸಕ ಕೋಟ್ಯಂತರ ರೂ. ವೆಚ್ಚ ಮಾಡಿ ಪೆನ್‍ಡ್ರೈವ್ ಹಂಚಿಕೆ ಮಾಡಿದ್ದಾರೆ. ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರ ಫೋನ್ ಕರೆ ಪರಿಶೀಲಿಸಿದರೆ ಈ ಸತ್ಯ ಹೊರಬರುತ್ತದೆ. ಡಿ.ಕೆ.ಶಿವಕುಮಾರ್ ಹಂಚಿಕೆ ಮಾಡಿದ್ದರೆ ದಾಖಲೆ ಕೊಡಲಿ ಎಂದು ಅವರು ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್ ಹತ್ತಿರ ಪ್ರತಿದಿನ ನೂರಾರು ಮಂದಿ ಜನ ಬರುತ್ತಾರೆ. ಹಾಗೆಯೇ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮೂಲಕ ದೇವರಾಜೇಗೌಡ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಷಡ್ಯಂತ್ರ ಹೂಡಿರಬಹುದು ಎಂದು ಅವರು ಆರೋಪಿಸಿದರು.

ಪುಜ್ವಲ್ ರೇವಣ್ಣ ತನಗೆ ಸಂಬಂಧಿಸಿದ ಸುದ್ದಿ, ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾಗ, ಇದೇ ದೇವರಾಜೇಗೌಡ, ತಡೆಯಾಜ್ಞೆ ತೆರವುಗೊಳಿಸದರೆ ಎಲ್ಲವನ್ನೂ ಸಾರ್ವಜನಿಕರೆದುರು ಬಿಚ್ಚಿಡ್ತೀನಿ ಎಂದು ಹೇಳಿದ್ದರಲ್ಲವೆ? ಎಂದು ಗಣಿಗ ಪ್ರಶ್ನಿಸಿದರು.

ಪೆನ್‍ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಜೆಡಿಎಸ್ ಮಟ್ಟ ಹಾಕಲು ಬಿಜೆಪಿ ಹೂಡಿರುವ ತಂತ್ರ ಇದಾಗಿದೆ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವುದು ಬಿಜೆಪಿ ನಾಯಕರ ಉದ್ದೇಶವಾಗಿದೆ. ಎಸ್‍ಐಟಿ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ನಡೆಸಿ ಸತ್ಯವನ್ನು ಹೊರತರಲಿದ್ದಾರೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News