ಕೆಆರ್‌ಎಸ್‍ನಿಂದ ಮುಂಗಾರು ಬೆಳೆಗೆ ನೀರುಹರಿಸಲಾಗುವುದು : ಸಚಿವ ಚಲುವರಾಯಸ್ವಾಮಿ
ಮಂಡ್ಯ : ಕೆಆರ್‌ಎಸ್ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಪ್ರಸಕ್ತ ಮುಂಗಾರು ಬೆಳೆಗೆ ನೀರುಹರಿಸಲಾಗುವುದು. ನಾಳೆಯಿಂದಲೇ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ನಾಗಮಂಗಲದ ತನ್ನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಲಾಶಯದಲ್ಲಿ ಇರುವ ನೀರಿನ ಲಭ್ಯತೆ ಪ್ರಕಾರ ಒಂದು ಬೆಳೆಗೆ ನೀರುಹರಿಸಲಾಗುವುದು. ಜಲಾಶಯ ಭರ್ತಿಯಾದರೆ ಬೇಸಿಗೆ ಬೆಳೆಗೂ ನೀರುಹರಿಸಲಾಗುವುದು ಎಂದರು.
ಕೆಆರ್‌ಎಸ್ ಜಲಾಶಯಕ್ಕೆ 35 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಮಳೆ ಪ್ರಮಾಣ ಕಡಿಮೆಯಾದರೂ 115 ಅಡಿ ತಲುಪುವುದು ನಿಶ್ಚಿತ. ಹಾಗಾಗಿ ಒಂದು ಬೆಳೆಗೆ ನೀರು ಹರಿಸಬಹುದು. ಒಂದು ವೇಳೆ ಜಲಾಶಯ ಭರ್ತಿಯಾದರೆ ಬೇಸಿಗೆ ಬೆಳೆಗೂ ನೀರು ಹರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕಾವೇರಿಕೊಳ್ಳದ ಕಬಿನಿ, ಹಾರಂಗಿ ಭರ್ತಿಯಾಗಿವೆ. ಕಬಿನಿಯಿಂದ ಹೆಚ್ಚುವರಿಯಾಗಿರುವ 30 ಸಾವಿರ ಕ್ಯೂಸೆಕ್ ತಮಿಳುನಾಡಿಗೆ ಹರಿದುಹೋಗುತ್ತಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಪಾಲನೆ ಆಗುತ್ತಿದೆ. ಕೆಆರ್ ಎಸ್‍ನಿಂದ ತಮಿಳುನಾಡಿಗೆ ನೀರುಹರಿಸುವ ಅಗತ್ಯವಿಲ್ಲ ಎಂದು ಅವರು ಮಾಹಿತಿ ನೀಡಿದರು.
ಕೆಆರ್ ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಲ್ಲಿ ಜನಜಾನುವಾರುಗಳ ಕುಡಿಯುವ ನೀರಿಗಾಗಿ ಈಗಾಗಲೇ ನೀರುಹರಿಸಲಾಗುತ್ತಿದೆ. ಜಲಾಶಯದ ಮಟ್ಟ 111 ಅಡಿ ದಾಟಿರುವುದರಿಂದ ನೀರುಹರಿಯುವಿಕೆ ಮುಂದುವರೆಯಲಿದೆ. ಹಾಗಾಗಿ ರೈತರು ಭತ್ತ, ರಾಗಿ, ಜೋಳ ಬಿತ್ತನೆ ಮಾಡುವಂತೆ ಅವರು ಮನವಿ ಮಾಡಿದರು.
ಈಗಾಗಲೇ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಅಗತ್ಯ ಇರುವ ಬಿತ್ತನೆಬೀಜ ಅಗತ್ಯಕ್ಕಿಂತ ಹೆಚ್ಚು ಸಂಗ್ರಹವಿದೆ. 78 ಸೊಸೈಟಿ ಸೇರಿದಂತೆ ಜಿಲ್ಲೆಯ 109 ಕೇಂದ್ರಗಳಲ್ಲಿ ಭತ್ತ, ರಾಗಿ, ಜೋಳ ಬಿತ್ತನೆ ಬೀಜ ವಿತರಣೆ ಆಗುತ್ತದೆ. ಇದಲ್ಲದೆ ರಸಗೊಬ್ಬರಕ್ಕೂ ಯಾವುದೇ ಕೊರತೆ ಇಲ್ಲ ಎಂದು ಅವರು ಹೇಳಿದರು.
ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ :
“ತಾವು ಗೆದ್ದ ತಕ್ಷಣ ಕಾವೇರಿ ಮತ್ತು ಮೇಕೆದಾಟು ವಿವಾದ ಬಗೆಹರಿಸಿ ರಾಜ್ಯಕ್ಕೆ ನ್ಯಾಯ ಕೊಡಿಸುವೆ ಎಂದು ಲೋಕಸಭಾ ಚುನಾವಣಾ ಪ್ರಚಾರ ವೇಳೆ ಈಗ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಭರವಸೆ ನೀಡಿದ್ದರು. ಈಗ ನೂರು ವರ್ಷದ ಕಾವೇರಿ ಸಮಸ್ಯೆ ತಕ್ಷಣ ಬಗೆಹರಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ. ಜವಾಬ್ಧಾರಿಯುತ ಸಂಸದರಾಗಿ ಸರ್ವಪಕ್ಷ ಸಭೆಗೆ ಗೈರಾಗಿ, ಸಭೆ ಬಗ್ಗೆ ಕೇವಲವಾಗಿ ಮಾತನಾಡಿ ಮಂಡ್ಯ ಜನರಿಗೆ ಅಗೌರವ ತಂದಿದ್ದಾರೆ. ಐದು ವರ್ಷದಲ್ಲಿ ಸಿಡಬ್ಲ್ಯುಆರ್‍ಸಿ, ಸಿಡಬ್ಲ್ಯುಎಂಎ ವಿಸರ್ಜನೆ ಮಾಡಿಸಿ ಸಂಪೂರ್ಣವಾಗಿ ಕರ್ನಾಟಕಕ್ಕೆ ನ್ಯಾಯ ಕೊಡಿಸಲಿ, ನಾನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ.” ಎಂದು ಚಲುವರಾಯಸ್ವಾಮಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಟಿ.ಕೃಷ್ಣೇಗೌಡ, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮನ್‍ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಇತರ ಮುಖಂಡರು ಉಪಸ್ಥಿತರಿದ್ದರು.