×
Ad

ಹಳ್ಳಿಯ ಕೊನೆಯ ಸಂಜೆ....

Update: 2026-06-14 10:49 IST

ಇವತ್ತು ನಮ್ಮ ಹಳ್ಳಿಗಳ ದೊಡ್ಡ ಸಮಸ್ಯೆ ನೀರಿನ ಕೊರತೆಯೋ, ಕೃಷಿಯ ಸಂಕಷ್ಟವೋ, ಉದ್ಯೋಗದ ಅಭಾವವೋ ಮಾತ್ರವಲ್ಲ. ಕೇಳುವವರ ಕೊರತೆ. ಹಿರಿಯರಿಗೆ ಮಾತನಾಡುವ ಆಸೆ ಇದೆ. ಅವರ ಅನುಭವಗಳ ದೊಡ್ಡ ಗೋದಾಮು ಇನ್ನೂ ತುಂಬಿಕೊಂಡೇ ಇದೆ. ಆದರೆ ಅದನ್ನು ತೆರೆಯಲು ಯಾರಿಗೂ ತಾಳ್ಮೆ ಇಲ್ಲ. ಒಂದೇ ಮನೆಯೊಳಗೆ ಅಜ್ಜ, ಅಜ್ಜಿ ಇಬ್ಬರೂ ಇದ್ದಾರೆ. ಇಬ್ಬರಿಗೂ ಮಾತಾಡಬೇಕಿದೆ. ಇಬ್ಬರಿಗೂ ನೆನಪುಗಳಿವೆ. ಇಬ್ಬರಿಗೂ ಹೇಳಬೇಕಾದ ಬದುಕಿದೆ. ಆದರೆ ಕೇಳುವವರು ಇಲ್ಲ. ನಿಧಾನವಾಗಿ ಮಾತುಗಳು ಅವರ ಒಳಗೇ ಉಳಿಯುತ್ತವೆ. ಆ ಮಾತುಗಳ ಜೊತೆ ಮನುಷ್ಯರೂ ಒಳಗೇ ಕುಸಿಯುತ್ತಾರೆ.

ಈದೇಶದ ಹಳ್ಳಿಗಳ ಬಗ್ಗೆ ಯೋಚಿಸುವಾಗ ನನಗೆ ಮೊದಲು ನೆನಪಾಗುವುದು ಇಡೀ ಊರನ್ನು ಜೋಡಿಸುವ ಅಲ್ಲಿಯ ಗ್ರಾಮ್ಯರ ಮಾತುಗಳು. ಹೌದು, ಒಂದು ಕಾಲದಲ್ಲಿ ದೇರ್ಲದಂಥ ಹಳ್ಳಿಗಳು ಬರೀ ಮಾತುಗಳಿಂದಲೇ ಕಟ್ಟಲ್ಪಟ್ಟಿದ್ದವು. ಕಲ್ಲು ಮಣ್ಣಿನಿಂದ ಮನೆಗಳು ನಿರ್ಮಾಣವಾಗಿದ್ದರೂ ಇಡೀ ಹಳ್ಳಿಯನ್ನು ಒಂದು ಸಮುದಾಯವಾಗಿ ಹಿಡಿದು ನಿಲ್ಲಿಸುತ್ತಿದ್ದದ್ದು ಮಾತುಗಳೇ. ಜಗಲಿಯ ಮೇಲೆ ಕುಳಿತಿದ್ದ ಅಜ್ಜ ಹೇಳುತ್ತಿದ್ದ ಕಥೆ, ಗದ್ದೆಯಿಂದ ವಾಪಸಾದ ರೈತ ಹೇಳುವ ಸುದ್ದಿ, ಬಾವಿಯ ಬಳಿ ನೀರು ಸೇದುವ ಹೆಂಗಸರು ಹಂಚಿಕೊಂಡ ನೋವು, ದೂರದ ಮನೋಳಿ ಕಾಡಿಗೆ ಹೋಗಿ ಕಟ್ಟಿಗೆ ತರುತ್ತಿದ್ದ ನನ್ನಮ್ಮ ಹೇಳುತ್ತಿದ್ದ ಕಾಡು ಭೂತದ ಕಥೆ, ಕೊಡಗಿನ ಕಾಫಿ ತೋಟಕ್ಕೆ ದುಡಿಯಲು ಹೋದ ನಾರನಣ್ಣ ಘಟ್ಟ ಇಳಿದು ಬಂದು ಹೇಳುತ್ತಿದ್ದ ಎಸ್ಟೇಟ್ ಮಾಲಕರ ಕಥೆ, ಸಂಜೆ ಅಂಗಡಿಯ ಮುಂದೆ ಸೇರಿದ ಯುವಕರು ಕಟ್ಟಿದ ಕನಸುಗಳು ಇವೆಲ್ಲ ಸೇರಿ ಒಂದು ಊರನ್ನು ಊರನ್ನಾಗಿ ಮಾಡುತ್ತಿದ್ದವು.

ಇವತ್ತು ನಮ್ಮ ಹಳ್ಳಿಗಳನ್ನು ಸಿಗಿದು ಸಾಗುವ ಕಾಂಕ್ರಿಟ್ ರಸ್ತೆಗಳು ಹೆಚ್ಚಾಗಿವೆ. ಮನೆ ಮನೆಗಳಿಗೆ ಮಹಡಿ ಸೇರಿಕೊಂಡಿದೆ. ಅವು ದೊಡ್ಡದಾಗಿವೆ. ಬ್ಯಾಂಕ್ ಖಾತೆಗಳು ದಪ್ಪವಾಗಿವೆ. ಪ್ರತೀ ದಿನ ಮಕ್ಕಳ ಶಿಕ್ಷಣಕ್ಕಾಗಿ ಊರೊಟ್ಟಿಗೆ ಹಳದಿ ಬಸ್ಸುಗಳು ಬಂದು ಹೋಗುತ್ತವೆ. ದೊಡ್ಡವರು ಊರಿಗೆ ಬರುವ ಕೆಂಪು ಬಸ್ಸು ಹತ್ತಿ ಅದೇ ಮಕ್ಕಳು ಹೋಗುವ ಪೇಟೆಗೆ ದುಡಿಮೆಗೆ ಹೋಗುತ್ತಾರೆ. ಮಾತಿನ ಮಂಟಪವಾಗುತ್ತಿದ್ದ ಅರಳಿ ಕಟ್ಟೆಗಳ ಕಲ್ಲುಗಳು ಅದೇ ಮರದ ಬೇರು ಬೆಳೆದು ಒಡೆದು ಮುರಿದು ಹೋಗಿವೆ. ಮೊನ್ನೆ ಮೊನ್ನೆ ರಾಜರಸ್ತೆ ಅಗಲವಾಗುವಾಗ ಇಂಥ ನೂರಾರು ನೆರಳು ಮರಗಳು ನೆಲಕ್ಕುರುಳಿದವು.

ನಾನು ಸಣ್ಣವನಿದ್ದಾಗ ಮನೆ ಜಗಲಿಯ ಕಥೆಯೇ ಬೇರೆ. ಬರೀ ಅರ್ಧ ಎಲೆ, ಒಂದು ಚೂರು ಅಡಿಕೆ... ಇಷ್ಟಕ್ಕೆ ಕಥೆಗಳು ಹುಟ್ಟುತ್ತಿದ್ದವು. ಮಳೆ ಬಿಟ್ಟ ಮೇಲೆ ಅದೇ ಜಗಲಿಯ ಬುಡದಲ್ಲಿ ಚಿಟ್ಟೆಗಳು ಎದ್ದೆದ್ದು ಬರುವ ಹಾಗೆ ಎಷ್ಟೋ ಕಥೆಗಳು. ಯಾರೋ ಒಬ್ಬರು ‘‘ಮಳೆ ಈ ಸಲ ಬೇಗ ಬರುತ್ತದಂತೆ’’ ಎಂದರೆ ಸಾಕು. ಅಲ್ಲಿಂದ ಗಂಟೆಗಟ್ಟಲೆ ಮಾತು ಶುರುವಾಗುತ್ತಿತ್ತು. ಮಳೆಯ ಮಾತು ಕೃಷಿಗೆ ಹೋಗುತ್ತಿತ್ತು. ಕೃಷಿಯ ಮಾತು ಎತ್ತುಗಳಿಗೆ ಹೋಗುತ್ತಿತ್ತು. ಎತ್ತುಗಳ ಮಾತು ಹಳೆಯ ರೈತರಿಗೆ ಹೋಗುತ್ತಿತ್ತು. ಕೊನೆಗೆ ಯಾರದೋ ಮದುವೆ, ಯಾರದೋ ಜಗಳ, ಯಾರದೋ ಸಾಧನೆ.. ಎಲ್ಲವೂ ಸೇರಿ ಆ ಒಂದು ಸಂಜೆಯನ್ನು ತುಂಬಿಸುತ್ತಿತ್ತು. ಮರುದಿನ ಮತ್ತೆ ಅದೇ ಜಗಲಿ, ಅದೇ ಹಿರಿಯರು, ಅದೇ ಕಥೆಗಳು..

ಇಂದು ಪ್ರತಿಯೊಬ್ಬರ ಕೈಯಲ್ಲಿ ಜಗತ್ತಿನ ಸುದ್ದಿಗಳಿವೆ. ಆದರೆ ಪಕ್ಕದ ಮನೆಯವರ ಬದುಕಿನ ಸುದ್ದಿ ಇಲ್ಲ, ಸಂಕಟವಿಲ್ಲ, ಸಂಬಂಧವಿಲ್ಲ. ಹೊಸ ಜನ ಚಂದ್ರನ ಮೇಲೆ, ಮಂಗಳನ ಮೇಲೆ ಮನೆ ಕಟ್ಟುವ ಮಾತನಾಡುತ್ತಾರೆ. ಆದರೆ ಪಕ್ಕದ ಮನೆಯ ಅಂಗಳದಲ್ಲಿ ಏನಾಗುತ್ತದೆ ಎನ್ನುವುದೇ ಅವರಿಗೆ ಗೊತ್ತಿಲ್ಲ.ಇದು ಕೇವಲ ತಂತ್ರಜ್ಞಾನದ ಪರಿಣಾಮವಲ್ಲ. ಸಂಬಂಧಗಳ ರೂಪಾಂತರ. ಒಂದು ಕಾಲದಲ್ಲಿ ಮನೆಯ ಅಂಗಳದಲ್ಲಿ ಕುಳಿತಿದ್ದ ಅಜ್ಜ ಮನೆಗೆ ಬಂದ ಅತಿಥಿಯನ್ನು ಹಿಡಿದುಕೊಂಡು ಎರಡು ಗಂಟೆ ಮಾತನಾಡುತ್ತಿದ್ದ. ಇಂದು ಮನೆಯ ಮೊಮ್ಮಗ ಅಜ್ಜನ ಪಕ್ಕದಲ್ಲೇ ಕುಳಿತಿದ್ದರೂ ಇಬ್ಬರ ಮಧ್ಯೆ ಒಂದು ಪರದೆ ನಿಂತಿದೆ. ಆ ಪರದೆ ಗಾಜಿನದು. ಆದರೆ ಅದರ ಗೋಡೆ ಕಲ್ಲಿನ ಗೋಡೆಗಿಂತ ಗಟ್ಟಿಯಾದುದು.

ನಾನು ಇತ್ತೀಚೆಗೆ ಒಂದು ಮನೆಯಲ್ಲಿ ನೋಡಿದ ದೃಶ್ಯ ಇನ್ನೂ ಮನಸ್ಸಿನಲ್ಲಿ ಉಳಿದಿದೆ. ಅಲ್ಲಿ ನಾಲ್ಕು ತಲೆಮಾರಿನ ಜನರಿದ್ದರು. ತೊಂಭತ್ತರ ಅಜ್ಜ, ಎಪ್ಪತ್ತರ ಅಜ್ಜಿ, ಐವತ್ತರ ಮಗ, ಇಪ್ಪತ್ತರ ಮೊಮ್ಮಗ. ನಾಲ್ವರೂ ಒಂದೇ ಚಾವಡಿಯಲ್ಲಿ ಕುಳಿತಿದ್ದರು. ಆದರೆ ನಾಲ್ವರೂ ಬೌದ್ಧಿಕವಾಗಿ ಬೇರೆ ಬೇರೆ ಜಗತ್ತಿನಲ್ಲಿದ್ದರು. ಅಜ್ಜ ಕಿಟಕಿಯಾಚೆ ನೋಡುತ್ತಿದ್ದ. ಅಜ್ಜಿ ದೇವರ ಫೋಟೊ ನೋಡುತ್ತಿದ್ದರು. ಮಗ ಟಿ.ವಿ. ನೋಡುತ್ತಿದ್ದ. ಮೊಮ್ಮಗ ಮೊಬೈಲ್ ನೋಡುತ್ತಿದ್ದ. ಹೌದು, ಆ ಮನೆ ತುಂಬಾ ಜನರಿದ್ದರು. ಆದರೆ ಅ ಜನರು ಮಾತು ಮರೆತಿದ್ದರು!

ಇವತ್ತು ಹಳ್ಳಿಗಳಲ್ಲಿ ಹಿರಿಯರು ಹೆಚ್ಚು ಮಾತನಾಡುತ್ತಿದ್ದಾರೆ. ಆದರೆ ಅವರನ್ನು ಕೇಳುವವರು ಕಡಿಮೆಯಾಗಿದ್ದಾರೆ. ಅವರ ಬಳಿ ಅನುಭವಗಳಿವೆ. ಕಥೆಗಳಿವೆ. ಬದುಕಿನ ಪಾಠಗಳಿವೆ. ಆದರೆ ಅವುಗಳನ್ನು ಸ್ವೀಕರಿಸುವ ಮನಸ್ಸಿಲ್ಲ. ನಮ್ಮ ಪಕ್ಕದ ಊರಿನ ಒಬ್ಬ ಹಿರಿಯ ರೈತರು ಹೇಳಿದ ಮಾತು ನೆನಪಾಗುತ್ತದೆ. ನನ್ನ ಬದುಕಿನಲ್ಲಿ ಎಪ್ಪತ್ತು ವರ್ಷ ಕೃಷಿ ಮಾಡಿದ್ದೇನೆ. ಯಾವ ಮೋಡ ಮಳೆ ಕೊಡುತ್ತದೆ, ಯಾವ ಮೋಡ ಮೋಸ ಮಾಡುತ್ತದೆ ಎಂದು ಹೇಳಬಲ್ಲೆ. ಆದರೆ ನನ್ನ ಮೊಮ್ಮಗನಿಗೆ ಇದನ್ನು ಕೇಳಲು ಸಮಯ ಸಿಗುವುದಿಲ್ಲ. ಆ ಮಾತಿನಲ್ಲಿ ಕೇವಲ ಒಬ್ಬ ಅಜ್ಜನ ನೋವಿರಲಿಲ್ಲ. ಆ ಇಡೀ ತಲೆಮಾರಿನ ಹತಾಶೆ ಇತ್ತು. ಸಂಕಟವಿತ್ತು. ತಲ್ಲಣವಿತ್ತು ಮತ್ತು ಆ ಹೊಸ ಹುಡುಗನೂ ಅನ್ನವನ್ನೇ ತಿನ್ನುತ್ತಾನೆ! ನಾವು ಇಂದು ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಡಿಜಿಟಲ್ ಕ್ರಾಂತಿಯ ಬಗ್ಗೆ ಮಾತನಾಡುತ್ತಿದ್ದೇವೆ. ನವ ನಾಗರಿಕತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಒಂದು ಪ್ರಶ್ನೆಯನ್ನು ಸಹಜವಾಗಿ ನಮಗೆ ನಾವೇ ಕೇಳಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ ಆಚೆ ನಾವು ನಮ್ಮ ಹಳ್ಳಿಯ ಹಿರಿಯರ ಬುದ್ಧಿಮತ್ತೆಯನ್ನು ಏನು ಮಾಡುತ್ತಿದ್ದೇವೆ? ಅವರ ನೆನಪುಗಳ, ಅನುಭವಗಳ ಬಾಗಿಲನ್ನು ನಾವು ತೆರೆಯುವುದೇ ಇಲ್ಲ ಯಾಕೆ?

ನನ್ನ ಬಾಲ್ಯದಲ್ಲಿ ಯಾರ ಮನೆಯಲ್ಲಾದರೂ ಮದುವೆ ಎಂದರೆ ಅದು ಕೇವಲ ಆ ಒಂದು ಮನೆಯ ಕಾರ್ಯಕ್ರಮವಾಗಿರಲಿಲ್ಲ. ಇಡೀ ಊರಿನ ಹಬ್ಬವಾಗುತ್ತಿತ್ತು. ಹಿಂದಿನ ದಿನ ರಾತ್ರಿ ಕರೆಯದೆ ಹತ್ತಾರು ಜನ ಬಂದು ತರಕಾರಿ ಹೆಚ್ಚುತ್ತಿದ್ದರು. ತೋರಣ ಕಟ್ಟುತ್ತಿದ್ದರು. ಬರುವವರಿಗೆ ತಾಂಬೂಲ ಸಿದ್ಧಗೊಳಿಸುತ್ತಿದ್ದರು. ಯಾರ ಮನೆಯಲ್ಲಾದರೂ ಸಾವು ಸಂಭವಿಸಿದರೆ ಕ್ಷಣಾರ್ಧದಲ್ಲಿ ನೂರು ಜನ ಸೇರುತ್ತಿದ್ದರು. ಕಣ್ಣೀರು ಒರೆಸುವುದಕ್ಕಿಂತ ಮೊದಲು ಸಾವಿನ ಕಾರಣ ಹುಡುಕುವವರೂ ಇದ್ದರು. ಅಲ್ಲೇ ನೂರು ಕಥೆಗಳು ಹುಟ್ಟುತ್ತಿದ್ದವು. ಒಂದು ಘಟನೆ ಊರಿನ ನಾಲ್ಕು ಬೀದಿಗಳನ್ನು ದಾಟಿ ಹತ್ತು ಊರುಗಳಿಗೆ ತಲುಪುವಷ್ಟರಲ್ಲಿ ಇನ್ನಷ್ಟು ಬಣ್ಣಗಳನ್ನು ಪಡೆದುಕೊಳ್ಳುತ್ತಿತ್ತು.

ಊರಿನ ಹುಡುಗಿಯೊಬ್ಬಳು ರಾತ್ರೋರಾತ್ರಿ ಯಾರಿಗೂ ಹೇಳದೆ ಬಸ್ಸು ಹತ್ತಿದರೂ ಅದು ಒಂದು ಕಥೆ. ಬೇರೊಂದು ಮನೆಯ ಹುಡುಗನ ಬೈಕ್ ಏರಿದರೂ ಅದೂ ಊರಿನ ಮರ್ಯಾದೆಯ ಪ್ರಶ್ನೆ. ಹಳ್ಳಿಗಳಲ್ಲಿ ಸುದ್ದಿ ಎಂಬುದು ಪತ್ರಿಕೆಯಲ್ಲಿ ಬರುತ್ತಿರಲಿಲ್ಲ. ಅದು ಮನುಷ್ಯರಿಂದ ಮನುಷ್ಯರಿಗೆ ಹರಿಯುತ್ತಿತ್ತು. ಅದಕ್ಕೇ ಪ್ರತಿಯೊಬ್ಬರೂ ಇನ್ನೊಬ್ಬರ ಬದುಕಿನ ಭಾಗವಾಗಿದ್ದರು.ಜಾತ್ರೆಗಳು ಕೂಡ ಹಾಗೆಯೇ. ಒಂದು ಊರಿನ ಜಾತ್ರೆ ಮುಗಿದರೆ ಮತ್ತೊಂದು ಊರಿಗೆ ಜಾತ್ರೆ ಸಾಗುತ್ತಿತ್ತು. ಜನ ಮನೆಗಳಿಗೆ ಬೀಗ ಹಾಕಿ ಅಲ್ಲಿಯ ಜಾತ್ರೆ ನೋಡಲು ಹೊರಡುತ್ತಿದ್ದರು. ಸಂತೆಯ ದಿನಗಳು, ಹಬ್ಬದ ದಿನಗಳು, ದೈವಗಳ ನೇಮೋತ್ಸವಗಳು ಸಂಬಂಧಗಳನ್ನು ನವೀಕರಿಸುವ ಸಂದರ್ಭಗಳಾಗಿದ್ದವು. ದೇವರಿಗಿಂತ ಹೆಚ್ಚು ಮನುಷ್ಯರನ್ನು ಮನುಷ್ಯರೊಂದಿಗೆ ಕಟ್ಟಿ ಹಿಡಿಯುವ ಶಕ್ತಿ ಅವುಗಳಿಗೆ ಇತ್ತು.

ಬ್ಯಾಂಕಿನಲ್ಲಿ ಕೆಲಸ ಮಾಡುವ ಮಗ, ವಿದೇಶದಲ್ಲಿ ಉದ್ಯೋಗದಲ್ಲಿರುವ ಅಳಿಯ, ನಗರದಲ್ಲಿ ವ್ಯಾಪಾರ ಮಾಡುವ ಮೊಮ್ಮಗ ವರ್ಷಕ್ಕೆ ನಾಲ್ಕು ದಿನವಾದರೂ ಊರಿಗೆ ಬರುತ್ತಿದ್ದರು. ವಿಮಾನ, ರೈಲು ಹತ್ತಿ ಕೊನೆಗೆ ಕೆಂಪು ಬಸ್ಸಿನಿಂದ ಇಳಿದು ಗುಡ್ಡ ಏರಿ, ಹೊಳೆ ದಾಟಿ, ಸಂಕ ಹತ್ತಿ ತಮ್ಮ ಹುಟ್ಟಿದ ಮನೆಯ ಬಾಗಿಲು ತಲುಪುತ್ತಿದ್ದರು. ಅಂಗಿಯನ್ನು ಬಿಚ್ಚಿ ಗೋಡೆಯ ಆಣಿಗೆ ಸಿಕ್ಕಿಸಿ, ಬ್ಯಾಗನ್ನು ಮಂಚದ ಕೆಳಗೆ ತಳ್ಳಿ, ಲುಂಗಿ ಉಟ್ಟು ಮನೆಯವರ ಜೊತೆ ಬೆರೆತು ಹೋಗುತ್ತಿದ್ದರು. ಆಗ ಮನೆಯ ಗೋಡೆಗಳಿಗೂ ಜೀವ ಬರುತ್ತಿತ್ತು.

ಇವತ್ತು ಎಲ್ಲವೂ ಇದೆ. ರಸ್ತೆ ಇದೆ. ವಾಹನ ಇದೆ. ಹಣ ಇದೆ. ಸೌಲಭ್ಯ ಇದೆ. ಆದರೆ ಏನೋ ಇಲ್ಲ. ಎಲ್ಲೋ ಒಂದು ಕಡೆ ಸಂಬಂಧಗಳ ಉಸಿರು ಕಡಿಮೆಯಾಗಿದೆ. ನನ್ನೂರಿನ ಎತ್ತರದ ಬೆಟ್ಟದ ತುದಿಯಿಂದ ನೋಡಿದಾಗ ದೇರ್ಲ ಇನ್ನೂ ಹಸಿರಾಗಿಯೇ ಕಾಣುತ್ತದೆ. ಊರು ತುಂಬಾ ತೆಂಗಿನ ತೋಟಗಳಿವೆ. ಅಡಿಕೆ ತೋಟಗಳಿವೆ. ಆದರೆ ಆ ಹಸಿರಿನ ನಡುವೆ ಈಗ ಇನ್ನೊಂದು ವಸ್ತು ಎದ್ದು ಕಾಣುತ್ತವೆ. ಮೊಬೈಲ್ ಟವರ್ಗಳು. ಅವು ಕೇವಲ ಸಿಗ್ನಲ್ ಕೊಡುವ ಕಬ್ಬಿಣದ ಗೋಪುರಗಳಲ್ಲ. ನಿಧಾನವಾಗಿ ಮನುಷ್ಯರ ನಡುವಿನ ಸಂಭಾಷಣೆಯನ್ನು ನುಂಗುತ್ತಿರುವ ಮೌನದ ಗೋಪುರಗಳು. ಹಿಂದೆ ಜನರು ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ನೋಡುತ್ತಿದ್ದರು. ಈಗ ಪರದೆಯೊಳಗೆ ನೋಡುತ್ತಿದ್ದಾರೆ. ಹಿಂದೆ ಜಗಲಿಯಲ್ಲಿ ಕೂತು ಮಾತಾಡುತ್ತಿದ್ದರು. ಈಗ ಒಂದೇ ಮನೆಯಲ್ಲಿ ಕೂತು ಬೇರೆ ಬೇರೆ ಜಗತ್ತುಗಳಲ್ಲಿ ಬದುಕುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಊರಿನ ಹಿರಿಯರೊಬ್ಬರನ್ನು ಭೇಟಿಯಾಗಲು ಹೋಗಿದ್ದೆ. ಅವರು ಮನೆಯ ಜಗಲಿಯ ಮೂಲೆಯಲ್ಲಿ ಮುದುಡಿ ಕುಳಿತಿದ್ದರು. ಪಕ್ಕದಲ್ಲಿ ಮಲಗಿದ್ದ ನಾಯಿಗೆ ಏನೋ ಬೈಯುತ್ತಿದ್ದರು. ಮೊದಲಿಗೆ ನಾಯಿಗೇ ಬೈಯುತ್ತಿದ್ದಾರೆ ಎನ್ನಿಸಿತು. ಸ್ವಲ್ಪ ಹೊತ್ತಿಗೆ ಅರಿವಾಯಿತು. ಅವರು ಬೈಯುತ್ತಿದ್ದದ್ದು ನಾಯಿಗಲ್ಲ. ತಮ್ಮ ಮಾತುಗಳನ್ನು ಕೇಳಲು ಸಮಯವಿಲ್ಲದ ಮನೆಯವರನ್ನು ಎಂದು. ತಮ್ಮ ಧ್ವನಿಯನ್ನು ಮರೆತುಬಿಟ್ಟ ಯಂತ್ರಗಳನ್ನು ಎಂದು. ತಮ್ಮ ಸುತ್ತಲೂ ಇದ್ದರೂ ದೂರವಾಗಿರುವ ಮನಸ್ಸುಗಳನ್ನು ಎಂದು.

‘‘ನಿಮ್ಮ ಜೊತೆಗೇ ಮಾತಾಡಲು ಬಂದಿದ್ದೇನೆ’’ ಅಜ್ಜ ಎಂದಾಗ ಅವರ ಕಣ್ಣಲ್ಲಿ ಮೂಡಿದ ಬೆಳಕು ನನಗೆ ಇಂದಿಗೂ ಮರೆಯಲಾಗಿಲ್ಲ. ಅವರು ಹೊಸದೇನನ್ನೂ ಹೇಳಲಿಲ್ಲ. ನಾನು ಕೇಳದ ಕಥೆಗಳನ್ನೂ ಹೇಳಲಿಲ್ಲ. ಆದರೆ ಅವರಿಗೆ ಆ ಮಾತುಗಳೆಲ್ಲ ಹೊಸತು. ಏಕೆಂದರೆ ಅವುಗಳನ್ನು ಕೇಳುವ ಕಿವಿಗಳು ಅವರಿಗೆ ಬಹಳ ದಿನಗಳಿಂದ ಸಿಕ್ಕಿರಲಿಲ್ಲ. ಅವರು ಹೇಳಿದ್ದು ಕಥೆಗಳಲ್ಲ. ಕೇಳಿಸಿಕೊಳ್ಳಬೇಕೆಂಬ ಹಂಬಲ.

ಇವತ್ತು ನಮ್ಮ ಹಳ್ಳಿಗಳ ದೊಡ್ಡ ಸಮಸ್ಯೆ ನೀರಿನ ಕೊರತೆಯೋ, ಕೃಷಿಯ ಸಂಕಷ್ಟವೋ, ಉದ್ಯೋಗದ ಅಭಾವವೋ ಮಾತ್ರವಲ್ಲ. ಕೇಳುವವರ ಕೊರತೆ. ಹಿರಿಯರಿಗೆ ಮಾತನಾಡುವ ಆಸೆ ಇದೆ. ಅವರ ಅನುಭವಗಳ ದೊಡ್ಡ ಗೋದಾಮು ಇನ್ನೂ ತುಂಬಿಕೊಂಡೇ ಇದೆ. ಆದರೆ ಅದನ್ನು ತೆರೆಯಲು ಯಾರಿಗೂ ತಾಳ್ಮೆ ಇಲ್ಲ. ಒಂದೇ ಮನೆಯೊಳಗೆ ಅಜ್ಜ, ಅಜ್ಜಿ ಇಬ್ಬರೂ ಇದ್ದಾರೆ. ಇಬ್ಬರಿಗೂ ಮಾತಾಡಬೇಕಿದೆ. ಇಬ್ಬರಿಗೂ ನೆನಪುಗಳಿವೆ. ಇಬ್ಬರಿಗೂ ಹೇಳಬೇಕಾದ ಬದುಕಿದೆ. ಆದರೆ ಕೇಳುವವರು ಇಲ್ಲ. ನಿಧಾನವಾಗಿ ಮಾತುಗಳು ಅವರ ಒಳಗೇ ಉಳಿಯುತ್ತವೆ. ಆ ಮಾತುಗಳ ಜೊತೆ ಮನುಷ್ಯರೂ ಒಳಗೇ ಕುಸಿಯುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಅದನ್ನು ‘ಏಕಾಂತ’ ಎನ್ನಬಹುದು. ಆದರೆ ಹಳ್ಳಿಯ ಭಾಷೆಯಲ್ಲಿ ಹೇಳುವುದಾದರೆ ಅದು ಸಂಬಂಧಗಳ ಬರ.

ಮೊಬೈಲ್ ಟವರ್ಗಳು ನಮಗಿಂದು ಜಗತ್ತಿನ ಯಾವ ಮೂಲೆಯವರ ಜೊತೆ ಬೇಕಾದರೂ ಮಾತನಾಡುವ ಶಕ್ತಿ ಕೊಟ್ಟಿವೆ. ಆದರೆ ನಮ್ಮ ಮನೆಯ ಜಗಲಿಯಲ್ಲಿ ಕುಳಿತಿರುವ ಅಜ್ಜನ ಜೊತೆ ಹತ್ತು ನಿಮಿಷ ಮಾತನಾಡುವ ತಾಳ್ಮೆಯನ್ನು ಕಸಿದುಕೊಂಡಿವೆ.

ಹಳ್ಳಿಗಳಲ್ಲಿ ಹಸಿರು ಇನ್ನೂ ಉಳಿದಿದೆ. ಮರಗಳು ಇನ್ನೂ ನಿಂತಿವೆ. ಹೊಳೆಗಳು ಇನ್ನೂ ಹರಿಯುತ್ತಿವೆ. ಆದರೆ ಮನಸ್ಸಿನ ಒಳಗಡೆಯ ಹಸಿರು ಒಣಗತೊಡಗಿದೆ. ಅದನ್ನು ಉಳಿಸುವ ಕೆಲಸ ಸರಕಾರಗಳದ್ದಲ್ಲ. ತಂತ್ರಜ್ಞಾನ-ಕಂಪೆನಿಗಳದ್ದೂ ಅಲ್ಲ. ಅದು ನಮ್ಮದ್ದೇ. ಒಂದೇ ಒಂದು ಸಂಜೆ ಫೋನನ್ನು ಬದಿಗಿಟ್ಟು ಮನೆಯ ಹಿರಿಯರ ಪಕ್ಕದಲ್ಲಿ ಕುಳಿತುಕೊಳ್ಳುವುದರಿಂದ ಆರಂಭವಾಗಬೇಕಾದ ಕೆಲಸ ಅದು. ಏಕೆಂದರೆ ಕೆಲವೊಮ್ಮೆ ಮನುಷ್ಯರಿಗೆ ಔಷಧಿಗಿಂತ ಹೆಚ್ಚು ಬೇಕಾಗಿರುವುದು ಯಾರಾದರೂ ತಮ್ಮ ಮಾತನ್ನು ಕೇಳುವ ಕಿವಿಗಳು.

ನಮ್ಮ ಹಳ್ಳಿಗಳ ಏಕಾಂತ ನಗರಗಳಿಗಿಂತ ಹೆಚ್ಚು ಅಪಾಯಕಾರಿ ಆಗುತ್ತಿದೆ. ನಗರದಲ್ಲಿ ಒಂಟಿತನ ಸಹಜ. ಆದರೆ ಹಳ್ಳಿಯಲ್ಲಿ ಜನರ ಮಧ್ಯೆ ಇದ್ದೂ ಒಂಟಿಯಾಗುವುದು ಭಯಾನಕ. ಹಿಂದೆ ಒಬ್ಬರ ನೋವು ಊರಿನ ನೋವಾಗುತ್ತಿತ್ತು. ಈಗ ಅದು ಕೇವಲ ಒಬ್ಬರೊಳಗಡೆಯೇ ಇಂಗುವಂತಾಗಿದೆ.

ಹಳ್ಳಿಗಳ ನಿಜವಾದ ಸಂಪತ್ತು ಭೂಮಿ ಅಲ್ಲ. ಅಡಿಕೆ ತೋಟಗಳಲ್ಲ. ನೀರಿನ ನಾಲೆಗಳಲ್ಲ, ತೆಂಗಿನ ಮರಗಳಲ್ಲ. ಮನೆಗಳಲ್ಲ. ಪರಸ್ಪರ ಮನುಷ್ಯರ ನಡುವಿನ ನಂಬಿ.ಕೆ.. ಒಬ್ಬರಿಗಾಗಿ ಇನ್ನೊಬ್ಬರು ಸಮಯ ಕೊಡುವ ಗುಣ. ಕೇಳುವ ತಾಳ್ಮೆ. ಕಾಯುವ ಮನಸ್ಸು. ಇವು ಕಳೆದು ಹೋದರೆ ಹಳ್ಳಿಗಳು ಉಳಿಯಬಹುದು. ಆದರೆ ‘ಹಳ್ಳಿತನ’ ಉಳಿಯುವುದಿಲ್ಲ! ಇಂದು ನಮ್ಮ ಬಳಿ ಸಮಯ ಉಳಿಸುವ ಸಾವಿರ ಯಂತ್ರಗಳಿವೆ. ಆದರೆ ಸಮಯವೇ ಇಲ್ಲ. ಜ್ಞಾನ ಹೆಚ್ಚಿದೆ. ಮಾಹಿತಿ ಹೆಚ್ಚಿದೆ. ಆದರೆ ಮನುಷ್ಯರ ಬಗ್ಗೆ ಇರುವ ಅರಿವು ಕಡಿಮೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News