ಮೈಸೂರು ಅರಮನೆಯನ್ನು ಸರಕಾರದ ವಶಕ್ಕೆ ಪಡೆಯಲು ಕಾರ್ಯಾಂಗದ ದುರ್ಬಳಕೆ ಯತ್ನ ನಡೆದಿದೆ: ಸಂಸದ ಯದುವೀರ್
ಸಂಸದ ಯದುವೀರ್ ಒಡೆಯರ್ (File Photo)
ಮೈಸೂರು : ಮೈಸೂರು ಅರಮನೆಯನ್ನು ಸರಕಾರದ ವಶಕ್ಕೆ ಪಡೆದುಕೊಳ್ಳಲು ಕಾರ್ಯಾಂಗದ ದುರ್ಬಳಕೆ ಮಾಡಿಕೊಳ್ಳುವ ಯತ್ನಗಳು ನಡೆದಿವೆ. ಆದರೆ, ನ್ಯಾಯಾಲಯದ ಮೂಲಕ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ನ.13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅಗಮಿಸಲಿದ್ದಾರೆ. ಅಂದು ಅವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ವಿಶಿಷ್ಟ ತಾರಾಲಯ ಉದ್ಘಾಟನೆ ಮಾಡಲಿದ್ದಾರೆ. ಈ ತಾರಾಯಲಯ ಪ್ರವಾಸೋದ್ಯಮಕ್ಕೆ ಪ್ರೇರಣೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.
ಈ ಬಾರಿಯ ದಸರಾದಲ್ಲಾಗಿರುವ ಕೆಲ ಲೋಪಗಳನ್ನು ಮುಂದಿನ ದಸರಾದಲ್ಲಿ ಸರಿಪಡಿಸಿಕೊಳ್ಳುವ ಅಗತ್ಯವಿದೆ. ಈ ಬಾರಿಯ ದಸರಾ ಮುಗಿದು ಹೋಗಿದೆ. ಹಾಗಾಗಿ ಲೋಪಗಳ ಬಗ್ಗೆ ಚರ್ಚೆ ಅನಗತ್ಯ. ಅರಮನೆ ಆವರಣದ ಭದ್ರತೆಯನ್ನು ಹೊರಗಿನವರಿಗೆ ವಹಿಸಿದ್ದರಿಂದ ಜಟ್ಟಿ ಕಾಳಗಕ್ಕೆ ಅಡಚಣೆ ಆಗಿದೆ ಎಂದರು.