ಸಿಎಂ ಸ್ಥಾನದಿಂದ ಕೆಳಗಿಳಿದ ವಿಚಾರವಾಗಿ ನನಗೆ ಯಾವುದೇ ಅತೃಪ್ತಿ ಇಲ್ಲ : ಸಿದ್ದರಾಮಯ್ಯ
ನಂಜನಗೂಡು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೊಟ್ಟ ಮಾತಿನಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶಮಾಡಿಕೊಟ್ಟೆ. ಸಿಎಂ ಸ್ಥಾನದಿಂದ ಕೆಳಗಿಳಿದ ವಿಚಾರವಾಗಿ ನನಗೆ ಯಾವುದೇ ಅತೃಪ್ತಿ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ದೇವನೂರು ದಾಸೋಹಮಠದಲ್ಲಿ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ 127ನೇ ಆರಾಧನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿ ಮತ್ತು ಅಭಿಮಾನ ಶಾಶ್ವತವಾಗಿ ನೆಲೆ ನಿಲ್ಲುತ್ತೆ. ಈ ಮಾತಿನ ಮೇಲೆ ಅಗಾಧ ನಂಬಿಕೆ ಇದ್ದು, ಸಿಎಂ ಸ್ಥಾನ ತ್ಯಜಿಸಿದರ ಹಿಂದೆ ಯಾವುದೇ ಅತೃಪ್ತಿ ನನಗಿಲ್ಲ ಎಂದು ಹೇಳಿದರು.
ದೇವನೂರು ಮಠ ಜನಪರ ಮತ್ತು ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದ್ದು. ಇಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂಬ ಆಸೆ ಹಲವು ದಿನಗಳಿಂದ ಇತ್ತು. ಇವತ್ತು ಮಠದಲ್ಲಿ ನಡೆಯುತ್ತಿರುವ ಆರಾಧನ ಮಹೋತ್ಸವದಲ್ಲಿ ಭಾಗವಹಿಸಲೇಬೇಕು ಎಂದು ನಿರ್ಧಾರ ಮಾಡಿ ಇಲ್ಲಿಗೆ ಬಂದಿರುವುದು ನನಗೆ ಸಂತಸ ತಂದಿದೆ ಎಂದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು.
ಸುತ್ತೂರು ಶ್ರೀ ದೇಶಿಕೇಂದ್ರಸ್ವಾಮೀಜಿ, ದೇವನೂರಿನ ಗುರುಮಲ್ಲೇಶ್ವರ ಮಠದ ಮಹಾಂತಸ್ವಾಮಿಗಳು, ಸೋಮಳ್ಳಿ ಮಠದ ಸಿದ್ದಮಲ್ಲ ಸ್ವಾಮಿಗಳು, ದೇವಿರಮ್ಮನಳ್ಳಿ ಮಠದ ನಾಗರಾಜ ಸ್ವಾಮಿಗಳು, ಶಾಸಕ ದರ್ಶನ್ ಧ್ರುವನಾರಾಯಣ, ಶಾಸಕ ಗಣೇಶ್‌ಪ್ರಸಾದ್ , ಮಾಜಿ ಶಾಸಕ ಕೇಶವ ಮೂರ್ತಿ, ಕಾಡ ಅಧ್ಯಕ್ಷ ಮರಿಸ್ವಾಮಿ, ಎಸ್.ಸಿ.ಬಸವರಾಜು, ಇಂದನ್‌ಬಾಬು, ಮಹಾದೇವಪ್ಪ ಮುಂತಾದವರು ಇದ್ದರು.