129 ಬೆಟ್ಟಿಂಗ್ ವೆಬ್ಸೈಟ್ ಗಳಿಗೆ ನಿರ್ಬಂಧ ವಿಧಿಸಲು ಬಳಸಿದ್ದು ಹೈಕೋರ್ಟ್ ಗಳ ಹೆಸರಿನಲ್ಲಿರುವ ನಕಲಿ ಆದೇಶ: ರಾಯಿಟರ್ಸ್ ತನಿಖಾ ವರದಿ
► ಅಲಹಾಬಾದ್, ರಾಜಸ್ಥಾನ ಹೈಕೋರ್ಟ್ಗಳ ಹೆಸರಿನಲ್ಲಿ ಆದೇಶ ಸೃಷ್ಟಿ ► ಸತ್ಯಾಸತ್ಯತೆ ಪರಿಶೀಲಿಸದೆ ನಿರ್ಬಂಧಕ್ಕೆ ಸೂಚನೆ ನೀಡಿದ ದೂರಸಂಪರ್ಕ ಇಲಾಖೆ
ಸಾಂದರ್ಭಿಕ ಚಿತ್ರ Photo: magnific
ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್ ಮತ್ತು ರಾಜಸ್ಥಾನ ಹೈಕೋರ್ಟ್ ಗಳ ಹೆಸರಿನಲ್ಲಿ ಸೃಷ್ಟಿಸಲಾದ ಎರಡು ನಕಲಿ ಆದೇಶಗಳ ಆಧಾರದಲ್ಲಿ ಭಾರತದಲ್ಲಿ 129 ಬೆಟ್ಟಿಂಗ್ ವೆಬ್ಸೈಟ್ ಗಳನ್ನು ನಿರ್ಬಂಧಿಸಿರುವುದು ರಾಯಿಟರ್ಸ್ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ.
ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಈ ಆದೇಶಗಳನ್ನು ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಭಾರತೀಯ ಕಾನೂನಿನ ಪ್ರಕಾರ ಅಕ್ರಮವಾಗಿರುವ ಜೂಜಾಟಕ್ಕೆ ಸಂಬಂಧಿಸಿದ 129 ವೆಬ್ ಸೈಟ್ ಗಳನ್ನು ನಿರ್ಬಂಧಿಸಲು ಈ ಆದೇಶಗಳನ್ನು ಬಳಸಿಕೊಳ್ಳಲಾಗಿತ್ತು. ಅವುಗಳನ್ನು ಯಾರು ಸೃಷ್ಟಿಸಿದರು ಮತ್ತು ಅವುಗಳ ತಯಾರಿಕೆಗೆ ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ನ್ಯಾಯಾಲಯದ ಆದೇಶಗಳೆಂದು ಹೇಳಿ ಸಲ್ಲಿಸಲಾದ ದೂರುಗಳ ಆಧಾರದಲ್ಲಿ ದೂರಸಂಪರ್ಕ ಇಲಾಖೆಯು (DOT) ವೆಬ್ ಸೈಟ್ ಗಳನ್ನು ನಿರ್ಬಂಧಿಸುವಂತೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISP) ಸೂಚಿಸಿತ್ತು. ಸೇವಾ ಪೂರೈಕೆದಾರರೂ ಈ ಸೂಚನೆಗಳನ್ನು ಪಾಲಿಸಿದ್ದರು. ಆದರೆ, ನಿರ್ಬಂಧಕ್ಕೆ ಆಧಾರವಾಗಿದ್ದ ಆದೇಶಗಳೇ ನಕಲಿ ಎಂಬುದು ನಂತರ ಬೆಳಕಿಗೆ ಬಂದಿದೆ.
ನ್ಯಾಯಾಲಯದ ದಾಖಲೆಗಳಲ್ಲೇ ಇಲ್ಲ ಆದೇಶ
ರಾಯಿಟರ್ಸ್ ನಡೆಸಿದ ಪರಿಶೀಲನೆಯಲ್ಲಿ ಎರಡೂ ಹೈಕೋರ್ಟ್ ಗಳ ಅಧಿಕೃತ ಆನ್ಲೈನ್ ದಾಖಲೆಗಳಲ್ಲಿ ಈ ಆದೇಶಗಳು ಪತ್ತೆಯಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ರಾಜಸ್ಥಾನ ಹೈಕೋರ್ಟ್ ನ ರಿಜಿಸ್ಟ್ರಾರ್, ತಮ್ಮ ನ್ಯಾಯಾಲಯದ ಹೆಸರಿನಲ್ಲಿ ಕಳುಹಿಸಲಾಗಿದ್ದ ಆದೇಶವು ನಕಲಿಯಾಗಿರುವಂತೆ ಕಾಣುತ್ತಿದೆ ಮತ್ತು ನ್ಯಾಯಾಲಯದ ಸರ್ವರ್ ನಲ್ಲೂ ಅಂತಹ ಆದೇಶವಿಲ್ಲ ಎಂದು ಇಮೇಲ್ ಮೂಲಕ ತಿಳಿಸಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಅಲಹಾಬಾದ್ ಹೈಕೋರ್ಟ್ ನ ರಿಜಿಸ್ಟ್ರಿಯೂ ತನಿಖೆ ನಡೆಸಿ, ತನ್ನ ಹೆಸರಿನಲ್ಲಿ ಕಳುಹಿಸಲಾಗಿದ್ದ ಆದೇಶ ನಕಲಿ ಎಂಬುದನ್ನು ಪತ್ತೆಹಚ್ಚಿದೆ. ಈ ಸಂಬಂಧ ನ. 6ರಂದು ಪೊಲೀಸರಿಗೆ ದೂರು ದಾಖಲಿಸಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
'ಇದು ನಕಲಿ. ಅಲಹಾಬಾದ್ ಹೈಕೋರ್ಟ್ ನಿಂದ ಹೊರಡಿಸಲಾದ ಅಧಿಕೃತ ಆದೇಶ ಇದಲ್ಲ' ಎಂದು ಉತ್ತರ ಪ್ರದೇಶದ ಹಿರಿಯ ಸೈಬರ್ ಅಪರಾಧ ವಿಭಾಗದ ಅಧಿಕಾರಿ ಘನಶ್ಯಾಮ್ ಯಾದವ್ ತಿಳಿಸಿದ್ದಾರೆ.
ದಿಲ್ಲಿ ಪೊಲೀಸರ ಹೆಸರಿನಲ್ಲೂ ನಕಲಿ ನೋಟಿಸ್
ನ್ಯಾಯಾಲಯಗಳ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಿದ ಪ್ರಕರಣದ ಬೆನ್ನಲ್ಲೇ, ದಿಲ್ಲಿ ಪೊಲೀಸರ ಹೆಸರಿನಲ್ಲೂ ನಕಲಿ ನೋಟಿಸ್ ಗಳನ್ನು ಕಳುಹಿಸಿರುವುದು ಬೆಳಕಿಗೆ ಬಂದಿದೆ.
ನ. 6ರಂದು ಡಿಜಿಟಲ್ ಹಕ್ಕುಗಳ ಸಂಘಟನೆಗಳಾದ ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಮತ್ತು ಸಾಫ್ಟ್ವೇರ್ ಫ್ರೀಡಂ ಲಾ ಸೆಂಟರ್ (SFLC.IN) ಎರಡು ನೋಟಿಸ್ ಗಳನ್ನು ಸ್ವೀಕರಿಸಿದ್ದವು. ಸಾಮಾಜಿಕ ಮಾಧ್ಯಮದಲ್ಲಿನ ಕೆಲವು ಪೋಸ್ಟ್ಗ ಳು ಮತ್ತು ಸಂಪೂರ್ಣ ಖಾತೆಗಳನ್ನು ತೆಗೆದುಹಾಕುವಂತೆ ಈ ನೋಟಿಸ್ ಗಳಲ್ಲಿ ಸೂಚಿಸಲಾಗಿತ್ತು. ಆದರೆ, ಈ ನೋಟಿಸ್ಗಳನ್ನು ದಿಲ್ಲಿ ಪೊಲೀಸರು ನೀಡಿರಲಿಲ್ಲ ಎಂದು ಎಕ್ಸ್ ಕಾರ್ಪ್ ದಿಲ್ಲಿ ಹೈಕೋರ್ಟ್ ಗೆ ತಿಳಿಸಿದೆ.
SFLC.IN ಸಂಸ್ಥೆಯು ತನಗೆ ಬಂದಿದ್ದ ನೋಟಿಸ್ ನ ಸತ್ಯಾಸತ್ಯತೆ ಪರಿಶೀಲಿಸಲು ದಿಲ್ಲಿ ಪೊಲೀಸರನ್ನು ಸಂಪರ್ಕಿಸಿತ್ತು. ಪೊಲೀಸರು ಇಂತಹ ಯಾವುದೇ ನೋಟಿಸ್ ನೀಡಿರುವುದನ್ನು ದೃಢಪಡಿಸದ ಹಿನ್ನೆಲೆಯಲ್ಲಿ SFLC.IN ಮತ್ತು IFF ಹೈಕೋರ್ಟ್ ಮೆಟ್ಟಿಲೇರಿದ್ದವು.
ವಿಚಾರಣೆ ವೇಳೆ ನೋಟಿಸ್ ನ ಹಿಂದಿದ್ದ ವ್ಯಕ್ತಿಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. SFLC.IN ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಪೊಲೀಸರಿಗೆ ದೂರು ಸಲ್ಲಿಸಿದ್ದ ವಕೀಲರು ತಾವು ಬಿಜೆಪಿ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಂಡಿದ್ದರು.
ಹಲವು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಹಾಗೂ ಸಂಪೂರ್ಣ ಖಾತೆಗಳನ್ನು ತೆಗೆದುಹಾಕಬೇಕೆಂಬ ಬೇಡಿಕೆಗೆ ಬೆಂಬಲವಾಗಿ ಹೆಸರನ್ನು ಉಲ್ಲೇಖಿಸದ ನ್ಯಾಯಾಲಯದ ಆದೇಶಗಳನ್ನೂ ಅವರು ಆಧಾರವಾಗಿ ನೀಡಿದ್ದರು.
ಈ ಬಗ್ಗೆ ಸ್ಪಷ್ಟನೆ ಕೋರಿ IFF, RSSಗೆ ಪತ್ರ ಬರೆದಿದ್ದರೂ ಉತ್ತರ ಬಂದಿರಲಿಲ್ಲ. SFLC.IN ನೋಟಿಸ್ ನಲ್ಲಿ ನೀಡಲಾಗಿದ್ದ ಇಮೇಲ್ ವಿಳಾಸಕ್ಕೆ ದಿಲ್ಲಿ ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸಂದೇಶ ಬೌನ್ಸ್ ಆಗಿ ವಾಪಸ್ ಬಂದಿತ್ತು.
ನಂತರ ದಿಲ್ಲಿ ಪೊಲೀಸರು ತಮ್ಮ ಅಧಿಕೃತ ವೆಬ್ಸೈಟ್ ನಲ್ಲಿದ್ದ ತಪ್ಪಾದ ಇಮೇಲ್ ವಿಳಾಸವನ್ನು ಸರಿಪಡಿಸಿದರು. ಈ ಹಿಂದೆ ಬಂದಿದ್ದ ಎರಡು ನೋಟಿಸ್ ಗಳನ್ನು ತಾವು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಈ ನಕಲಿ ನೋಟಿಸ್ ಗಳನ್ನು ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚುವಂತೆ ದಿಲ್ಲಿ ಪೊಲೀಸರಿಗೆ ದೂರು ನೀಡಿರುವುದಾಗಿ ಎಕ್ಸ್ ಕಾರ್ಪ್ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದರು.
ಎರಡೂ ಸಂಘಟನೆಗಳು ಪ್ರತ್ಯೇಕವಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಎರಡೂ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಿತ್ತು. ಇದರಿಂದ ನಕಲಿ ನೋಟಿಸ್ ಗಳ ಹಿಂದಿನ ಘಟನೆಗಳ ಸರಣಿ ಬಹಿರಂಗವಾಯಿತು.
ಇಮೇಲ್ ಮೂಲಕ ಅಧಿಕಾರಿಗಳಿಗೆ ಆದೇಶ ರವಾನೆ
ಬೆಟ್ಟಿಂಗ್ ವೆಬ್ಸೈಟ್ ಗಳ ಪ್ರಕರಣದಲ್ಲಿ, ರಾಜಸ್ಥಾನ ಹೈಕೋರ್ಟ್ನಲ್ಲಿ ಅಡ್ವೊಕೇಟ್-ಆನ್-ರೆಕಾರ್ಡ್ (AOR) ಆಗಿರುವುದಾಗಿ ಹೇಳಿಕೊಂಡಿದ್ದ 'ಆರ್ಯನ್ ಚೌಧರಿ' ಎಂಬಾತ ಇಮೇಲ್ ಗಳನ್ನು ಕಳುಹಿಸಿದ್ದ. ಮತ್ತೊಂದೆಡೆ, 'ಕಾರ್ತಿಕೇ ಪಾಂಡೆ' ಎಂಬಾತ ಆಗಸ್ಟ್ 22ರಂದು ಅಲಹಾಬಾದ್ ಹೈಕೋರ್ಟ್ ನ ಹೆಸರಿನಲ್ಲಿ ಸೃಷ್ಟಿಸಲಾದ ಆದೇಶವನ್ನು ಅಧಿಕಾರಿಗಳಿಗೆ ಇಮೇಲ್ ಮಾಡಿದ್ದ.
ಈ ಇಮೇಲ್ ಗಳ ಮೂಲಕ ಬಂದ ಪತ್ರಗಳನ್ನು ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಆಂತರಿಕವಾಗಿ ಚರ್ಚಿಸಿದ್ದರು. ಬಳಿಕ ಬೆಟ್ಟಿಂಗ್ ವೆಬ್ಸೈಟ್ ಗಳನ್ನು ನಿರ್ಬಂಧಿಸುವಂತೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸೂಚನೆಗಳನ್ನು ರವಾನಿಸಿದ್ದರು ಎಂದು ರಾಯಿಟರ್ಸ್ ವರದಿ ಬಹಿರಂಗಪಡಿಸಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಅಂತರ್ಜಾಲ ನಿರ್ಬಂಧ
ಭಾರತದಲ್ಲಿ ಅಂತರ್ಜಾಲದಲ್ಲಿನ ವಿಷಯಗಳನ್ನು ತೆಗೆದುಹಾಕುವಂತೆ ಅಥವಾ ನಿರ್ಬಂಧಿಸುವಂತೆ ಮಾಡುವ ಬೇಡಿಕೆಗಳು ಹೆಚ್ಚುತ್ತಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪೋಸ್ಟ್ ಗಳನ್ನು ವೀಕ್ಷಿಸಲು ಸಾಧ್ಯವಾಗದಿದ್ದಾಗ, 'ಕಾನೂನು ವಿನಂತಿಯನ್ನು ಪಾಲಿಸಿ ಈ ವಿಷಯವನ್ನು ನಿರ್ಬಂಧಿಸಿರುವುದರಿಂದ ಭಾರತದಲ್ಲಿ ಲಭ್ಯವಿಲ್ಲ' ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ ಎಂದು ಆಗಾಗ ವರದಿ ಮಾಡುತ್ತಿದ್ದಾರೆ.
ಇಂತಹ ನಿರ್ಬಂಧಗಳು ಬಹುತೇಕ ಸಂದರ್ಭಗಳಲ್ಲಿ ಯಾವುದೇ ಮುನ್ಸೂಚನೆ, ನೋಟಿಸ್ ಅಥವಾ ವಿವರಣೆಯಿಲ್ಲದೆ ಜಾರಿಯಾಗುತ್ತಿವೆ. ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆಗಳ ಹೆಸರಿನಲ್ಲಿ ನಕಲಿ ಆದೇಶ ಹಾಗೂ ನೋಟಿಸ್ ಗಳನ್ನು ಸೃಷ್ಟಿಸಿ ವಿಷಯಗಳನ್ನು ನಿರ್ಬಂಧಿಸಿರುವ ಪ್ರಕರಣಗಳು ಡಿಜಿಟಲ್ ಸೆನ್ಸಾರ್ಶಿಪ್ ವ್ಯವಸ್ಥೆಯ ದುರ್ಬಳಕೆಯ ಆತಂಕವನ್ನು ಹೆಚ್ಚಿಸಿವೆ.
ಸೌಜನ್ಯ: thewire.in