ಕುಂಭಮೇಳಕ್ಕೆ ಮೀಸಲಿಟ್ಟ ಹಣದ ಶೇ.0.1ರಷ್ಟು ಶಿಕ್ಷಣಕ್ಕೆ ವ್ಯಯಿಸಿದ್ದರೆ 100ಕ್ಕೂ ಹೆಚ್ಚು ಮರಾಠಿ ಶಾಲೆಗಳು ಮುಚ್ಚುವುದನ್ನು ತಡೆಯಬಹುದಿತ್ತು: ನ್ಯಾ. ಪಿ.ಬಿ. ವರಾಳೆ
Photo | livelaw
ಮುಂಬೈ : ಮರಾಠಿ ಮಾಧ್ಯಮ ಶಾಲೆಗಳ ಸ್ಥಿತಿಗತಿ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರು ಕುಂಭಮೇಳಕ್ಕೆ ಖರ್ಚು ಮಾಡುವ ನಿಧಿಯ ಶೇ.0.1ರಷ್ಟು ಹಣವನ್ನು ಶಿಕ್ಷಣಕ್ಕೆ ಖರ್ಚು ಮಾಡಿದ್ದರೆ 100ಕ್ಕೂ ಹೆಚ್ಚು ಮರಾಠಿ ಮಾಧ್ಯಮ ಶಾಲೆಗಳನ್ನು ಮುಚ್ಚುವುದನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ
ನಾಸಿಕ್‌ನಲ್ಲಿ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ವರಾಳೆ, ಸರಕಾರವು ಕುಂಭ ಮೇಳದ ಮೂಲಸೌಕರ್ಯಕ್ಕೆ 34,000 ಕೋಟಿ ರೂ. ಮತ್ತು ಕಾರಿಡಾರ್ ಯೋಜನೆಗೆ 11,000 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ರೀತಿ ವೆಚ್ಚಗಳಿಗೆ ನನ್ನ ಯಾವುದೇ ಅಭ್ಯಂತರವಿಲ್ಲ. ಆದರೆ, ಕುಂಭಮೇಳಕ್ಕೆ ಮೀಸಲಿಟ್ಟಿರುವ ಹಣದ ಕೇವಲ ಶೇ.0.1ರಷ್ಟು ಅಂದರೆ ಸರಿಸುಮಾರು 32 ಕೋಟಿ ಹಣವನ್ನು ಶಿಕ್ಷಣಕ್ಕೆ ಖರ್ಚು ಮಾಡಿದ್ದರೆ 100ರಿಂದ 150ಕ್ಕೂ ಹೆಚ್ಚು ಮರಾಠಿ ಮಾಧ್ಯಮ ಶಾಲೆಗಳು ಮುಚ್ಚುವುದನ್ನು ತಡೆಯಬಹುದಿತ್ತು ಎಂದು ಹೇಳಿದರು.
ವರದಿಯ ಪ್ರಕಾರ, 22,425.39 ಕೋಟಿ ಮೊತ್ತದ ಸಮಗ್ರ ಕುಂಭಮೇಳ ಅಭಿವೃದ್ಧಿ ಯೋಜನೆಯನ್ನು ಮಾರ್ಚ್ 13ರಂದು ನಡೆದ ಅಪೆಕ್ಸ್ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿಯವರು ಅನುಮೋದಿಸಿದ್ದಾರೆ ಎಂದು ಮಹಾರಾಷ್ಟ್ರ ಸರಕಾರವು ಕೇಂದ್ರ ಸರಕಾರಕ್ಕೆ ತಿಳಿಸಿದೆ. ನಾಸಿಕ್‌ನಲ್ಲಿ ಸಿಂಹಸ್ಥ ಕುಂಭಮೇಳವು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ.
ಅವರು ವಸತಿ ಶಾಲೆಗಳ ಸ್ಥಿತಿಗತಿಯ ಬಗ್ಗೆಯೂ ಮಾತನಾಡಿದ್ದಾರೆ. ಆಶ್ರಮ ಶಾಲೆಯೊಂದರಲ್ಲಿ ನೆಲದ ಮೇಲೆ ಮಲಗಿದ್ದ ಮೂವರು ವಿದ್ಯಾರ್ಥಿನಿಯರು ಹಾವು ಕಡಿತದಿಂದ ಮೃತಪಟ್ಟ ಕುರಿತು ತಾವು ಓದಿದ್ದಾಗಿ ಅವರು ಉಲ್ಲೇಖಿಸಿದರು.
ಅನೇಕ ವಸತಿ ಶಾಲೆಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ನ್ಯಾಯಮೂರ್ತಿ ವರಾಳೆ ಹೇಳಿದ್ದಾರೆ.
ಶೈಕ್ಷಣಿಕ ಮೂಲಸೌಕರ್ಯದಲ್ಲಿ ಬದಲಾವಣೆಗಳ ಅಗತ್ಯವನ್ನು ಒತ್ತಿಹೇಳಿದ ನ್ಯಾಯಮೂರ್ತಿ ವರಾಳೆ, ಈ ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ನಲ್ಲಿ ಶೇ.8ರಿಂದ 12ರಷ್ಟು ಅನುದಾನ ಮೀಸಲಾಗುತ್ತಿತ್ತು. ಆದರೆ ಇದೀಗ ಆ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.