×
Ad

1992ರ ಅಜ್ಮೀರ್ ಅತ್ಯಾಚಾರ ಪ್ರಕರಣ | ಪೊಕ್ಸೊ ನ್ಯಾಯಾಲಯದಿಂದ 6 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

Update: 2024-08-20 19:02 IST

PC : indiatodayne.in

ಅಜ್ಮೇರ್ : 1992ರಲ್ಲಿ ಹಲವು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದ 6 ಮಂದಿ ಅಪರಾಧಿಗಳಿಗೆ ಪೊಕ್ಸೊ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆಯೊಂದಿಗೆ ತಲಾ 5 ಲಕ್ಷ ದಂಡ ವಿಧಿಸಿ ನ್ಯಾಯಾಧೀಶ ರಂಜನ್ ಸಿಂಗ್ ಆದೇಶ ಹೊರಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

11ರಿಂದ 20 ವರ್ಷದೊಳಗಿನ ಬಾಲಕಿಯರು ಅಜ್ಮೇರ್‌ ನ ಪ್ರಸಿದ್ಧ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು. ಅವರನ್ನು ತೋಟದ ಮನೆಗೆ ಕರೆಸಿ, ಅತ್ಯಾಚಾರ ಎಸಗಿರುವ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ 18 ಮಂದಿ ಆರೋಪಿಗಳಾಗಿದ್ದರೆ, ಆ ಪೈಕಿ ಪ್ರಮುಖ ಆರು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿತ್ತು. ಆರೋಪಿಗಳಾದ ನಫೀಸ್ ಚಿಸ್ತಿ, ನಸೀಮ್ ಅಲಿಯಾಸ್ ಟಾರ್ಜನ್, ಸಲೀಂ ಚಿಸ್ತಿ, ಇಕ್ಬಾಲ್ ಭಾಟಿ, ಸುಹೇಲ್‌ ಘನಿ ಚಿಸ್ತಿ ಮತ್ತು ಸೈಯದ್ ಝಮೀರ್ ಹುಸೇನ್ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇತರ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

1992ರ ಅಜ್ಮೇರ್‌ ಲೈಂಗಿಕ ಪ್ರಕರಣದ ಪ್ರಮುಖ ಆರೋಪಿ ಸುಹೇಲ್‌ ಘನಿ ಚಿಸ್ತಿ 26 ವರ್ಷಗಳ ನಂತರ 2018ರ ಫೆ.16ರಂದು ಪೊಲೀಸರಿಗೆ ಶರಣಾಗಿದ್ದ. ಜೈಪುರ ಖಾದಿಮ್‌ ಮೊಹಲ್ಲಾ ನಿವಾಸಿಯಾಗಿದ್ದ ಸುಹೇಲ್‌ ಮೊದಲು ಯುವತಿಯರ ಸ್ನೇಹ ಬೆಳೆಸಿ, ಅತ್ಯಾಚಾರ ಎಸಗುತ್ತಿದ್ದ. ಬಳಿಕ ಅವರ ನಗ್ನ ಚಿತ್ರ ತೆಗೆದು ಬ್ಲಾಕ್‌ಮೇಲ್‌ ಮಾಡುತ್ತಿದ್ದ. ಯುವತಿಯರ ನಗ್ನ ಚಿತ್ರಗಳನ್ನು ಅಭಿವೃದ್ಧಿಪಡಿಸಲು ಸ್ಟುಡಿಯೊಗೆ ಕಳುಹಿಸಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣ ಬಹಿರಂಗಗೊಂಡ ನಂತರದಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಈ ಪ್ರಕರಣದಲ್ಲಿ ಸುಮಾರು 80 ಯುವತಿಯರ ಮೇಲೆ ಅತ್ಯಾಚಾರವೆಸಗಿ, ಅವರ ನಗ್ನ ಚಿತ್ರಗಳನ್ನು ಬಳಸಿ ಬೆದರಿಕೆ ಹಾಕಲಾಗಿತ್ತು. ಸಂತ್ರಸ್ತೆಯರ ಪೈಕಿ 30 ಮಂದಿ ಶಾಲಾ ವಿದ್ಯಾರ್ಥಿನಿಯರು ಎನ್ನಲಾಗಿದೆ.

ಪ್ರಕರಣ ಬಹಿರಂಗವಾಗುತ್ತಿದ್ದಂತೆ 30 ಸಂತ್ರಸ್ತೆಯರು ದೂರು ನೀಡಲು ಮುಂದೆ ಬಂದಿದ್ದರು. 12 ಮಂದಿ ಮಾತ್ರ ದೂರು ದಾಖಲಿಸಿದ್ದರು. ಆದರೆ ವಿಚಾರಣೆಗೆ ಕೇವಲ ಇಬ್ಬರು ಮಾತ್ರ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News