ಗುಜರಾತ್ ನ ರಾಸಾಯನಿಕ ಸ್ಥಾವರದಲ್ಲಿ ಭೀಕರ ಸ್ಫೋಟ: ಐವರು ಕಾರ್ಮಿಕರು ಮೃತ್ಯು
15 ಕಿ.ಮೀ. ವ್ಯಾಪ್ತಿಯಲ್ಲಿ ಮೊಳಗಿದ ಸ್ಫೋಟದ ಸದ್ದು
Photo: India Today
ಭರೂಚ್: ಗುಜರಾತ್ ನ ಭರೂಚ್ ಜಿಲ್ಲೆಯ ರಾಸಾಯನಿಕ ಸ್ಥಾವರದಲ್ಲಿ ಸಂಭವಿಸಿದ ಭೀಕರ ರಿಯಾಕ್ಟರ್ ಸ್ಫೋಟಕ್ಕೆ ಐವರು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ವಾಗ್ರಾ ಪ್ರದೇಶದ ಸೈಖಾ ಜಿಐಡಿಸಿ ಕೈಗಾರಿಕಾ ಎಸ್ಟೇಟ್ನಲ್ಲಿರುವ ಸಿಂಝೀಲ್ ಫಾರ್ಮಾಕೆಮ್ ನಲ್ಲಿ ಈ ಘಟನೆ ನಡೆದಿದೆ.
ಸ್ಥಾವರದಲ್ಲಿ ಹೈಡ್ರೋಜನೀಕರಣ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ 15 ಕಿಲೋ ಲೀಟರ್ ಸಾಮರ್ಥ್ಯದ ರಿಯಾಕ್ಟರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರಿಯಾಕ್ಟರ್ ನ ಅವಶೇಷಗಳು ಕಂಪೆನಿಯ ಆವರಣದ ಹೊರಗೂ ಬಿದ್ದಿವೆ. ಸ್ಫೋಟದ ಸದ್ದು ಸುಮಾರು 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇಳಿಸಿದೆ ಎಂದು ಲಭ್ಯವಿರುವ ಮಾಹಿತಿ ತಿಳಿಸಿದೆ.
ಅನಿಲ ಸೋರಿಕೆ; ಆತಂಕ
ಸ್ಫೋಟದ ಬಳಿಕ ಮೀಥಿಲೀನ್ ಡೈಕ್ಲೋರೈಡ್ (ಎಂಡಿಸಿ) ಅನಿಲ ಸೋರಿಕೆಯಾಗಿದ್ದು, ಸ್ಥಾವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಿಲ ಆವರಿಸಿತ್ತು. ಘಟನೆಯಿಂದಾಗಿ ಕಾರ್ಖಾನೆಯ ಆವರಣದಾದ್ಯಂತ ಭಾರೀ ಯಂತ್ರೋಪಕರಣಗಳ ಅವಶೇಷಗಳು ಮತ್ತು ಲೋಹದ ಹಾಳೆಗಳು ಚದುರಿಕೊಂಡಿದ್ದವು.
ವಿಷಯ ತಿಳಿಯುತ್ತಿದ್ದಂತೆ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.