ಶೇ. 80ರಷ್ಟು ಭಾರತೀಯರು ಮಾಂಸಾಹಾರಿಗಳು": BRICS ಔತಣದ ಮೆನು ಕುರಿತು ರಾಹುಲ್ ಗಾಂಧಿ ವ್ಯಂಗ್ಯ
ಹೊಸದಿಲ್ಲಿ: ಬ್ರಿಕ್ಸ್ ಶೃಂಗಸಭೆಯ ಔತಣಕೂಟದ ಭಕ್ಷ್ಯಗಳ ಪಟ್ಟಿ (ಮೆನು) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ವಿದೇಶಗಳಿಂದ ಆಗಮಿಸಿದ್ದ ನಾಯಕರಿಗಾಗಿ ಸಿದ್ಧಪಡಿಸಿದ್ದ ಆಹಾರ ಪಟ್ಟಿಯಲ್ಲಿ ಮಾಂಸಾಹಾರಿ ಖಾದ್ಯಗಳು ಇಲ್ಲದಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಶೇ.80ರಷ್ಟು ಭಾರತೀಯರು ಮಾಂಸಾಹಾರಿಗಳು, ಭಾರತೀಯ ಮಾಂಸಾಹಾರ ರುಚಿಕರವಾಗಿರುತ್ತದೆ. ಹಾಗೆಯೇ ನನ್ನ ಸಹೋದರಿ ತಯಾರಿಸುವ ಛೋಲೆ ಭಟೂರೆ ಕೂಡ ರುಚಿಕರವಾಗಿರುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಶನಿವಾರ ಸಂಜೆ ಭಾರತ್ ಮಂಟಪದಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಔತಣಕೂಟ ಆಯೋಜಿಸಿದ್ದರು.
ಔತಣಕೂಟದ ಭಕ್ಷ್ಯಗಳ ಪಟ್ಟಿಯಲ್ಲಿ ಭಾರತದ ವಿವಿಧ ಭಾಗಗಳ ಸಸ್ಯಾಹಾರಿ ಖಾದ್ಯಗಳಿದ್ದವು. ಪ್ರಾದೇಶಿಕವಾಗಿ ವಿಶೇಷವಾಗಿರುವ ಖಾದ್ಯಗಳು ಹಾಗೂ ಹಳೆ ದಿಲ್ಲಿಯ ವಿಶಿಷ್ಟ ರುಚಿಕರ ಆಹಾರಗಳನ್ನು ಇದರಲ್ಲಿ ಸೇರಿಸಲಾಗಿತ್ತು.
ಆರಂಭಿಕ ಖಾದ್ಯಗಳಲ್ಲಿ ಖಾಂಡ್ವಿ ಮಿಲ್ಲೆ-ಫ್ಯೂಯಿಲ್, ಖುಂಬ್ ಗಲೌಟಿ ಪ್ರಮುಖವಾಗಿದ್ದವು. ಖುಂಬ್ ಗಲೌಟಿ ಎಂಬುದು ಅಣಬೆ ಕಬಾಬ್ ಆಗಿದ್ದು, ಶೀರ್ಮಲ್ ರೊಟ್ಟಿಯೊಂದಿಗೆ ಅದನ್ನು ಬಡಿಸಲಾಗಿತ್ತು. ಮುಖ್ಯ ಖಾದ್ಯಗಳಲ್ಲಿ ಪನೀರ್ ಲಬಾಬ್ದಾರ್, ಕ್ಯಾರೆಟ್ ಬೀನ್ ಪಲ್ಯ, ತಕ್ಕಾಲಿ ಬೇಳೆ ಸಾರು, ಸಿರಿಧಾನ್ಯ ಪುಲಾವ್ ಮತ್ತು ಬೀಟ್ರೂಟ್ ರೈತಾ ಸೇರಿ ಹಲವು ಖಾದ್ಯಗಳಿದ್ದವು. ಇವುಗಳೊಂದಿಗೆ ವಿವಿಧ ಬಗೆಯ ಭಾರತೀಯ ರೊಟ್ಟಿಗಳು, ಸಾಂಪ್ರದಾಯಿಕ ಸಿಹಿತಿಂಡಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.