ಉಮರ್ ಖಾಲಿದ್ ಗೆ 2026ರ ‘ಅಪಾಯದಲ್ಲಿರುವ ಮಾನವ ಹಕ್ಕುಗಳ ರಕ್ಷಕರ ಪ್ರಶಸ್ತಿ’
ಉಮರ್ ಖಾಲಿದ್ | Photo Credit : PTI
ಹೊಸದಿಲ್ಲಿ, ಅ. 8: 2020ರ ದಿಲ್ಲಿ ಗಲಭೆ ಪ್ರಕರಣದ ‘ದೊಡ್ಡ ಪಿತೂರಿ’ಗೆ ಸಂಬಂಧಿಸಿದಂತೆ ಆರು ವರ್ಷಗಳಿಂದ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರು 2026ರ ‘ಅಪಾಯದಲ್ಲಿರುವ ಮಾನವ ಹಕ್ಕುಗಳ ರಕ್ಷಕರ ಪ್ರಶಸ್ತಿ’ ಗೆದ್ದಿದ್ದಾರೆ.
ಐರ್ಲೆಂಡ್ ಮೂಲದ ಮಾನವ ಹಕ್ಕುಗಳ ಸಂಸ್ಥೆ ‘ಫ್ರಂಟ್ ಲೈನ್ ಡಿಫೆಂಡರ್ಸ್’ ಈ ಪ್ರಶಸ್ತಿ ನೀಡುತ್ತದೆ. ಡಬ್ಲಿನ್ ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದರೆ, ಉಮರ್ ಖಾಲಿದ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ. ಅವರು 2020ರ ಸೆಪ್ಟೆಂಬರ್ 13ರಿಂದ ವಿಚಾರಣೆ ಆರಂಭವಾಗದೆ ತಿಹಾರ್ ಜೈಲಿನಲ್ಲಿ ಬಂಧನದಲ್ಲಿದ್ದಾರೆ.
53 ಜನರು ಮೃತಪಟ್ಟು, ನೂರಾರು ಮಂದಿ ಗಾಯಗೊಂಡು ಹಾಗೂ ನಿರ್ವಸಿತರಾದ 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಉಮರ್ ಖಾಲಿದ್ ಅವರನ್ನು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (UAPA) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು.
ಉಮರ್ ಖಾಲಿದ್ ಹಿಂಸಾಚಾರಕ್ಕೆ ಕರೆ ನೀಡಿದ್ದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಸಾರ್ವಭೌಮ ಸಮಗ್ರತೆಗೆ ಅಗೌರವ ತರುವ ಬೃಹತ್ ಸಂಚಿನ ಭಾಗವಾಗಿದ್ದರು ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದರು.
ಅವರು ಮತ್ತು ಅವರ ಸಹಪಾಠಿ, JNUಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ತಿರಸ್ಕರಿಸಿವೆ. 2026ರ ಜನವರಿ 5ರಂದು ಸುಪ್ರೀಂ ಕೋರ್ಟ್ ಇಬ್ಬರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. ಬಳಿಕ ಸೆಪ್ಟೆಂಬರ್ 30ರಂದು ದಿಲ್ಲಿ ಉಚ್ಚ ನ್ಯಾಯಾಲಯವೂ ಜಾಮೀನು ನಿರಾಕರಿಸಿತು.
‘ಫ್ರಂಟ್ ಲೈನ್ ಡಿಫೆಂಡರ್ಸ್’ ಸಂಸ್ಥೆಯು ಖಾಲಿದ್ ಅವರ ಸುದೀರ್ಘ ಜೈಲುವಾಸವು ಭಾರತದಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಭಯೋತ್ಪಾದನೆ ವಿರೋಧಿ ಕಾನೂನುಗಳ ಬಳಕೆ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದೆ. ಜೊತೆಗೆ ಅವರ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮಗಳ ಪಾತ್ರವನ್ನೂ ಉಲ್ಲೇಖಿಸಿದೆ.
‘‘ಈ ಮಾದರಿಯು ಶಾಂತಿಯುತವಾಗಿ ಸಭೆ ಸೇರುವ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ತಮ್ಮ ಹಕ್ಕನ್ನು ಚಲಾಯಿಸುವ ಮಾನವ ಹಕ್ಕುಗಳ ರಕ್ಷಕರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲೆ ವಿಷಮ ಪರಿಣಾಮ ಬೀರುತ್ತಿದೆ’’ ಎಂದು ಸಂಸ್ಥೆ ಹೇಳಿದೆ.