Uttar Pradesh | ಹೈಕೋರ್ಟ್ ಅಮಾನತು ನಡುವೆಯೇ SP ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ ಲಕ್ನೊ ಮೇಯರ್!
Photo credit: livelaw
ಲಕ್ನೊ: ಅಲಹಾಬಾದ್ ಹೈಕೋರ್ಟ್ ತಮ್ಮ ಹಣಕಾಸು ಮತ್ತು ಆಡಳಿತಾತ್ಮಕ ಅಧಿಕಾರವನ್ನು ಅಮಾನತುಗೊಳಿಸಿದ್ದ ನಡುವೆಯೇ ಲಕ್ನೊ ನಗರ ಪಾಲಿಕೆ ಮೇಯರ್ ಸುಷ್ಮಾ ಖಾರ್ಕ್ವಾಲ್ ಅವರು ಸಮಾಜವಾದಿ ಪಕ್ಷದ (ಎಸ್ಪಿ) ಸದಸ್ಯ ಲಲಿತ್ ತಿವಾರಿಗೆ ಪ್ರಮಾಣ ವಚನ ಬೋಧಿಸಿದರು.
ಫೈಝುಲ್ಲಾಗಂಜ್ ವಾರ್ಡ್‌ನ 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ್ ಕುಮಾರ್ ಶುಕ್ಲಾ ಗೆದ್ದಿದ್ದರು. ಆದರೆ, ಅವರು ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ ಎರಡನೇ ವಿವಾಹದ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಸೋತ ಅಭ್ಯರ್ಥಿ ಲಲಿತ್ ತಿವಾರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರದೀಪ್ ಕುಮಾರ್ ಶುಕ್ಲಾ ಅವರ ಆಯ್ಕೆಯನ್ನು ರದ್ದುಪಡಿಸಿ, ಲಲಿತ್ ತಿವಾರಿಯನ್ನು ನಗರ ಪಾಲಿಕೆ ಸದಸ್ಯರಾಗಿ ಘೋಷಿಸಲು ಆದೇಶಿಸಿತ್ತು.
ಆದರೆ, ನ್ಯಾಯಾಲಯದ ಆದೇಶ ಜಾರಿಗೊಳಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಮೇಯರ್ ಸುಷ್ಮಾ ಖಾರ್ಕ್ವಾಲ್ ಅವರ ಹಣಕಾಸು ಮತ್ತು ಆಡಳಿತಾತ್ಮಕ ಅಧಿಕಾರವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು.
ಈ ನಡುವೆಯೇ ಲಾಲ್‌ಬಾಗ್‌ನಲ್ಲಿರುವ ನಗರ ಪಾಲಿಕೆ ಕಚೇರಿಯಲ್ಲಿ ನಗರ ಪಾಲಿಕೆ ಆಯುಕ್ತರು ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಲಲಿತ್ ತಿವಾರಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದ ಬಳಿಕ ಮೇಯರ್ ಅವರ ಅಧಿಕಾರ ಮರುಸ್ಥಾಪನೆಯಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಸುಷ್ಮಾ ಖಾರ್ಕ್ವಾಲ್, “ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೆ. ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಲಲಿತ್ ತಿವಾರಿ, “ಇದು ನ್ಯಾಯದ ಗೆಲುವು. ವಾರ್ಡ್‌ನ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ.