Photo | PTI

ಹೊಸದಿಲ್ಲಿ: ಜಂತರ್ ಮಂತರ್‌ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯೊಬ್ಬರ ಫೋಟೋವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಮಾರ್ಫ್ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದೊಂದಿಗೆ ಪ್ರದರ್ಶಿಸಿದ ಆರೋಪದ ಮೇಲೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬುಧ ವಿಹಾರ್ ಫೇಸ್–2 ನಿವಾಸಿಯಾಗಿರುವ 25 ವರ್ಷದ ಕಂಟೆಂಟ್ ಕ್ರಿಯೇಟರ್ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. CJP ಪ್ರತಿಭಟನೆಯ ಕೆಲವು ಸಂಘಟಕರು ಮತ್ತು ಪ್ರಮುಖ ಪದಾಧಿಕಾರಿಗಳು ಈ ಚಿತ್ರವನ್ನು ಸೃಷ್ಟಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಚಿತ್ರದಿಂದ ತಮಗೆ ತೀವ್ರ ವೇದನೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಫೋಟೋಗಳನ್ನು ಅನುಮತಿ ಇಲ್ಲದೆ ಆನ್‌ಲೈನ್‌ ನಲ್ಲಿ ಮತ್ತು ಪ್ರತಿಭಟನಾ ಸ್ಥಳದಲ್ಲಿ ಬಳಸಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. CJP ವಕ್ತಾರರಾದ ಅಭಿಜೀತ್‌ ದೀಪ್ಕೆ, ರತ್ನಾ ಸಿಂಗ್ ಮತ್ತು ಸೌರವ್ ದಾಸ್ ಸೇರಿದಂತೆ ಇತರರ ಹೆಸರನ್ನೂ ಅವರು ಉಲ್ಲೇಖಿಸಿದ್ದಾರೆ.

ಹೊಸದಿಲ್ಲಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ದೂರಿನಲ್ಲಿ ಏನಿದೆ?

‘ಜಂತರ್ ಮಂತರ್‌ ನಲ್ಲಿ ನಡೆದ ಇತ್ತೀಚಿನ CJP ಪ್ರತಿಭಟನೆಯ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಮತ್ತು ಸಂಘಟಕರು ನನ್ನ ವೈಯಕ್ತಿಕ ಫೋಟೋವನ್ನು ಅನುಮತಿ ಇಲ್ಲದೆ ಪಡೆದುಕೊಂಡರು. ಬಳಿಕ ಡಿಜಿಟಲ್ ಎಡಿಟಿಂಗ್ ಮತ್ತು AI ಫೇಸ್-ಸ್ವಾಪಿಂಗ್ (ಮುಖ ಬದಲಾಯಿಸುವ) ಸಾಧನಗಳನ್ನು ಬಳಸಿ ನನ್ನ ಮುಖವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದ ಪಕ್ಕದಲ್ಲಿ ಇರುವಂತೆ ಬದಲಾಯಿಸಿದರು. ಈ ಮೂಲಕ ಸಂಪೂರ್ಣ ಸುಳ್ಳಾದ, ಮುಜುಗರ ಉಂಟುಮಾಡುವ ಚಿತ್ರವನ್ನು ಸೃಷ್ಟಿಸಿದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಫೋಟೋವನ್ನು ಆನ್‌ಲೈನ್‌ ನಲ್ಲಿಯೂ ಹಾಗೂ ಪ್ರತಿಭಟನಾ ಸ್ಥಳದಲ್ಲಿಯೂ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಈ ಕೃತ್ಯದಿಂದ ನನಗೆ ಆಘಾತ ಉಂಟಾಗಿದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor