ಐಸ್ ಕ್ರೀಂ ಮಾರುಕಟ್ಟೆಗೆ ಅಂಬಾನಿ ನೇತೃತ್ವದ ರಿಲಯನ್ಸ್ ಎಂಟ್ರಿ: 10ರೂ.ಗೆ ಸಿಗಲಿದೆ ʼಬಾಂಬೆ ಕ್ರೀಮರಿʼ
Photo | AI
ಹೊಸದಿಲ್ಲಿ : ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್(RCPL) ಬಾಂಬೆ ಕ್ರೀಮರಿ ಎಂಬ ಐಸ್ಕ್ರೀಂ ಬ್ರ್ಯಾಂಡ್ ಅನ್ನು ಪರಿಚಯಿಸಿದೆ. ಈ ಮೂಲಕ ಅಂಬಾನಿ ನೇತೃತ್ವದ ರಿಲಯನ್ಸ್ ಐಸ್ ಕ್ರೀಂ ಮಾರುಕಟ್ಟೆಗೂ ಪ್ರವೇಶಿಸಿದೆ.
ಸೆಪ್ಟೆಂಬರ್ 1ರಂದು ‘ಬಾಂಬೆ ಕ್ರೀಮರಿ’ ಎಂಬ ಹೊಸ ಬ್ರ್ಯಾಂಡ್ ಅನ್ನು ರಿಲಯನ್ಸ್ ಘೋಷಿಸಿದೆ. RCPL ́ಬಾಂಬೆ ಕ್ರೀಮರಿ’ಯನ್ನು ಕೈಗೆಟುಕುವ ದರದ ಪ್ರೀಮಿಯಂ ಡೇರಿ ಬ್ರ್ಯಾಂಡ್ ಆಗಿ ಪರಿಚಯಿಸುತ್ತಿದೆ. ನೈಜ ಹಾಲಿನ ಪದಾರ್ಥಗಳನ್ನು ಬಳಸಿ ಉತ್ತಮ ಗುಣಮಟ್ಟದ ಐಸ್ಕ್ರೀಂ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದೆ.
‘ಬಾಂಬೆ ಕ್ರೀಮರಿ’ ಉತ್ಪನ್ನಗಳು ವಿವಿಧ ಮಾದರಿಗಳಲ್ಲಿ ಲಭ್ಯವಿರಲಿವೆ. ಇದರ ಉತ್ಪನ್ನಗಳಲ್ಲಿ ಕೋನ್‌ಗಳು, ಕಪ್‌ಗಳು, ಟಬ್‌ಗಳು, ಸ್ಟಿಕ್‌ಗಳು ಸೇರಿವೆ.
‘ಬಾಂಬೆ ಕ್ರೀಮರಿ’ ಐಸ್ ಕ್ರೀಂ ಉತ್ಪನ್ನಗಳ ಬೆಲೆ 10ರಿಂದ ಆರಂಭವಾಗಲಿದೆ ಎಂದು ಕಂಪೆನಿಯು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಕಂಪೆನಿಯ ಪ್ರಕಾರ, ‘ಬಾಂಬೆ ಕ್ರೀಮರಿ’ ಆರಂಭದಲ್ಲಿ ಪಶ್ಚಿಮ ಭಾರತದಲ್ಲಿ ಲಭ್ಯವಾಗಲಿದೆ. ಬಳಿಕ ಹಂತ ಹಂತವಾಗಿ ದೇಶದಾದ್ಯಂತ ಉತ್ಪನ್ನವನ್ನು ವಿಸ್ತರಿಸಲಿದೆ.