ಪ್ರತಿಭಟನಾಕಾರರ ಮೇಲೆ ಪೊಲೀಸ್ ಕ್ರಮ; ಸಂಸತ್ತಿನಲ್ಲಿ ಚರ್ಚೆಗೆ ಅಮಿತ್ ಶಾ ಸಿದ್ಧ: ಕೇಂದ್ರ ಸಚಿವ ಕಿರಣ್ ರಿಜಿಜು
Photo Credit: ndtv
ಹೊಸದಿಲ್ಲಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದ ಪೊಲೀಸ್ ಕ್ರಮ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆಯೂ ಸಂಸತ್ತಿನಲ್ಲಿ ಚರ್ಚಿಸಲು ಸರಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದರು.
ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ದಿಲ್ಲಿಯಲ್ಲಿ ಪೆಲೆಟ್ ಗನ್ ಗಳನ್ನು ಹಾಗೂ ಬಿಹಾರದಲ್ಲಿ AK-47 ರೈಫಲ್ ಗಳನ್ನು ಬಳಸಿರುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಹಾಜರಾಗಿ ವಿವರಿಸಬೇಕು ಎಂಬ ಪ್ರತಿಪಕ್ಷದ ಬೇಡಿಕೆಗೆ ರಿಜಿಜು ಒಪ್ಪಿಗೆ ಸೂಚಿಸಿದರು.
ಆದರೂ, ಸದನದ ಕಲಾಪದ ಸಂದರ್ಭದಲ್ಲಿ ವಿರೋಧ ಪಕ್ಷವು ಕೋಲಾಹಲ ಸೃಷ್ಟಿಸಬಾರದು ಎಂದು ಅವರು ಒತ್ತಿ ಹೇಳಿದರು.
‘ವಿದ್ಯಾರ್ಥಿಗಳ ಚಳುವಳಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಪೂರ್ಣ ಹಾಗೂ ವಿವರವಾದ ಚರ್ಚೆ ನಡೆಸಲು ಸರಕಾರ ಸಿದ್ಧವಿದೆ ಎಂಬುದು ಸ್ಪಷ್ಟ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ನಾನು ಹೇಳುತ್ತಿರುವ ಏಕೈಕ ಅಂಶವೆಂದರೆ, ಚರ್ಚೆ ಮತ್ತು ಉತ್ತರ ನೀಡಲಾಗುತ್ತಿರುವ ಸಂದರ್ಭದಲ್ಲಿ ಗೃಹ ಸಚಿವರ ಹೇಳಿಕೆಯನ್ನು ತಡೆಯಲು ವಿರೋಧ ಪಕ್ಷವು ಗೊಂದಲ ಸೃಷ್ಟಿಸಬಾರದು. ಅವರು ಗೃಹ ಸಚಿವರು ಮತ್ತು ಸರಕಾರದ ಉತ್ತರವನ್ನು ಕೇಳಬೇಕು’ ಎಂದು ರಿಜಿಜು ಹೇಳಿದರು.