‘ಅರಾಜಕತೆ ಸೋತಿದೆ’; SIR ಪ್ರಕ್ರಿಯೆ, ಜ್ಞಾನೇಶ್ ಕುಮಾರ್ ಸಮರ್ಥಿಸಿದ ಬಿಜೆಪಿ
ರವಿಶಂಕರ್ ಪ್ರಸಾದ್ Photo: x.com/ANI
ಹೊಸದಿಲ್ಲಿ: ಪ್ರತಿಭಟನೆಗಳನ್ನು ಟೀಕಿಸಿದ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು SIR ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು.
‘ಭಾರತ ಅರಾಜಕತೆಯಿಂದ ಕೂಡಿದ ದುರ್ಬಲ ರಾಷ್ಟ್ರವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಎಂದಿಗೂ ತಲೆಬಾಗಿಲ್ಲ, ಮುಂದೆಯೂ ಬಾಗುವುದಿಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಭಾರತೀಯ ಪ್ರಜಾಪ್ರಭುತ್ವವು ಅರಾಜಕತೆ ಸೃಷ್ಟಿಸುವ ಪ್ರಯತ್ನಗಳನ್ನು ವಿಫಲಗೊಳಿಸಿದೆ. ದೇಶವನ್ನು ಸಂಸತ್ತಿನ ಮೂಲಕ ಆಡಳಿತ ನಡೆಸಲಾಗುತ್ತದೆಯೇ ಹೊರತು ಬೀದಿ ಹೋರಾಟಗಳ ಮೂಲಕವಲ್ಲ’ ಎಂದು ಅವರು ಪ್ರತಿಪಾದಿಸಿದರು.
ಪ್ರತಿಭಟನೆಗಳಿಗೆ ತಮ್ಮ ಪಕ್ಷ ವಿರೋಧಿಯಲ್ಲ. ಆದರೆ, ಚುನಾವಣಾ ಸೋಲುಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಬೀದಿ ಪ್ರತಿಭಟನೆಗಳನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿವೆ ಎಂದು ಪ್ರಸಾದ್ ಆರೋಪಿಸಿದರು. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಗಳಿಸಿದ ಗೆಲುವನ್ನೂ ಅವರು ಉಲ್ಲೇಖಿಸಿದರು.
ಮುಂಬೈನಲ್ಲೂ ಪ್ರತಿಭಟನಾಕಾರರು ವಶಕ್ಕೆ
CJP ಪ್ರತಿಭಟನೆಗೆ ಮುಂಬೈ, ಚೆನ್ನೈ ಮತ್ತು ಅಹಮದಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಬೆಂಬಲ ವ್ಯಕ್ತವಾಯಿತು. ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 200 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಅವರಲ್ಲಿ ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಮತ್ತು ನಟ ಇಮ್ರಾನ್ ಖಾನ್ ಕೂಡ ಸೇರಿದ್ದರು.