ಉಳಿದ ಎರಡು ಬೇಡಿಕೆಗಳಿಗೆ ಕೇಂದ್ರದ ಒಪ್ಪಿಗೆ; ಪ್ರತಿಭಟನೆ ಹಿಂತೆಗೆದುಕೊಂಡ CJP
Photo Credit : PTI
ಹೊಸದಿಲ್ಲಿ: ಕಾಕ್ರೋಚ್ ಜನತಾ ಪಕ್ಷ (CJP) ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ಅಲ್ಲದೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ತನ್ನ ಬೆಂಬಲಿಗರಿಗೆ ಮನೆಗೆ ಮರಳುವಂತೆ ಮನವಿ ಮಾಡಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ, ಶನಿವಾರ ಸಂಜೆ ನಡೆದ ಸರಕಾರ ಮತ್ತು CJPಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಯಿತು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ CJP ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ CJP ವಕ್ತಾರರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ CJP ವಕ್ತಾರರು, CJP ಮುಂದಿಟ್ಟಿರುವ ಉಳಿದ ಬೇಡಿಕೆಗಳನ್ನೂ ಸರಕಾರ ಈಡೇರಿಸುವುದಾಗಿ ಭರವಸೆ ನೀಡಿದೆ. ಆ ಭರವಸೆಯನ್ನು ಸದ್ಭಾವನೆಯಿಂದ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಅಲ್ಲದೆ, ಸರಕಾರ ತನ್ನ ಮಾತನ್ನು ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಆದ್ದರಿಂದ ಪ್ರತಿಭಟನೆಯನ್ನು ತಕ್ಷಣದಿಂದಲೇ ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು.