×
Ad

ಅಯೋಧ್ಯೆ | ರಾಮಮಂದಿರದ ದೇಣಿಗೆ ದುರುಪಯೋಗ : 8 ಮಂದಿ ಆರೋಪಿಗಳ ಬಂಧನ

Update: 2026-06-26 12:12 IST

Photo | NDTV

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತಾದಿಗಳು ನೀಡಿದ್ದ ದೇಣಿಗೆ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ 8 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅವರನ್ನೆಲ್ಲ ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳನ್ನು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು, ಲವಕುಶ ಮಿಶ್ರ, ಅನುಕಲ್ಪ್ ಮಿಶ್ರ, ಅವಿನಾಶ್ ಶುಕ್ಲಾ, ಮನೀಶ್ ಯಾದವ್, ರಾಮಶಂಕರ್ ಮಿಶ್ರಾಲ, ಸುಭಾಷ್ ಚಂದ್ರ ಶ್ರೀ ವಾಸ್ತವ ಹಾಗೂ ಕರುಣೇಶ್ ಪಾಂಡೆ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಮ ಮಂದಿರದ ದೇಣಿಗೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳ ಕುರಿತು ತನಿಖೆಗಾಗಿ ನೇಮಕಗೊಂಡಿದ್ದ ಮೂವರು ಸದಸ್ಯರ ವಿಶೇಷ ತನಿಖಾ ತಂಡ ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಸಲ್ಲಿಸಿದ ಬೆನ್ನಿಗೇ ಈ ಬಂಧನ ನಡೆದಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೊಂದಿಗೆ ಸಂಬಂಧ ಹೊಂದಿರುವ ಕೃಷ್ಣ ಮೋಹನ್ ಎಂಬವರು ನೀಡಿದ ದೂರನ್ನು ಆಧರಿಸಿ ಗುರುವಾರ ಸಂಜೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

“ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಎದುರು ಅವರನ್ನೆಲ್ಲ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್  ಸದಸ್ಯ ಡಾ. ಅನಿಲ್ ಮಿಶ್ರಾಮ, ದೇವಾಲಯ ನಿರ್ಮಾಣ ಉಸ್ತುವಾರಿ ಗೋಪಾಲ್ ರಾವ್ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೊಳಪಡಿಸಿದರೂ ಅವರ ಹೆಸರುಗಳು ಎಫ್ಐಆರ್ ನಲ್ಲಿ ಸೇರ್ಪಡೆಯಾಗಿಲ್ಲ ಎಂದು ವರದಿಯಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News