×
Ad

Ayodhya Ram Mandir | ದೇಣಿಗೆಯಲ್ಲಿ ಅವ್ಯವಹಾರ: ಪ್ರಾಥಮಿಕ ವರದಿ ಸಲ್ಲಿಸಿದ SIT

Update: 2026-06-23 21:48 IST

ರಾಮಮಂದಿರ | Photo Credit : PTI 

ಲಕ್ನೋ, ಜೂ. 23: ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆಗಳ ಬಳಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡ (SIT) ಮಂಗಳವಾರ ಉತ್ತರ ಪ್ರದೇಶ ಸರಕಾರಕ್ಕೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ.

ಮಂದಿರದ ಉಸ್ತುವಾರಿ ನೋಡಿಕೊಳ್ಳುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿನಂತಿಯ ಮೇರೆಗೆ ಜೂನ್ 13ರಂದು ಮೂವರು ಸದಸ್ಯರ SIT ರಚಿಸಲಾಗಿತ್ತು. ಮಂದಿರದ ಉದ್ಯೋಗಿ ಲವಕುಶ ಮಿಶ್ರಾ ಅವರ ಅಯೋಧ್ಯೆಯ ನಿವಾಸದಲ್ಲಿ 10 ಲಕ್ಷ ರೂಪಾಯಿ ಪತ್ತೆಯಾದ ಬಳಿಕ ದೇಣಿಗೆ ದುರುಪಯೋಗದ ಆರೋಪಗಳು ಕೇಳಿಬಂದಿವೆ.

SIT ತನ್ನ ಪ್ರಾಥಮಿಕ ವರದಿಯನ್ನು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಅವರಿಗೆ ಹಸ್ತಾಂತರಿಸಿದೆ ಎಂದು ವಿಭಾಗೀಯ ಕಮಿಷನರ್ ವಿಜಯ್ ವಿಶ್ವಾಸ್ ಪಂತ್ ತಿಳಿಸಿದ್ದಾರೆ. ಆದರೆ ವರದಿಯಲ್ಲೇನಿದೆ ಎಂಬ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಪಂತ್, ಪೊಲೀಸ್ ಐಜಿ ಕಿರಣ್ ಎಸ್. ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಅವರನ್ನೊಳಗೊಂಡ ಸಿಟ್ ತಂಡವು ಜೂನ್ 15ರಿಂದ 22ರವರೆಗೆ ಏಳು ದಿನಗಳ ಕಾಲ ಅಯೋಧ್ಯೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಈ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ.

ಸಿಸಿಟಿವಿ ದತ್ತಾಂಶಗಳ ಕೊರತೆ

ಮಂದಿರ ಸಂಕೀರ್ಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು 45 ದಿನಗಳ ಕಾಲ ಮಾತ್ರ ಸಂಗ್ರಹಿಸಿಡಲಾಗುತ್ತಿರುವುದರಿಂದ ಡಿಜಿಟಲ್ ಸಾಕ್ಷ್ಯಗಳ ಲಭ್ಯತೆ ಸೀಮಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಇದು SIT ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

ಸಮರ್ಪಕ ಡಿಜಿಟಲ್ ಸಾಕ್ಷ್ಯಗಳ ಕೊರತೆಯ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಹೆಚ್ಚಾಗಿ ಸಾಕ್ಷಿಗಳು, ಶಂಕಿತರು ಮತ್ತು ಮಂದಿರದ ಆಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳ ಹೇಳಿಕೆಗಳನ್ನೇ ಅವಲಂಬಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News