ಪಶ್ಚಿಮ ಬಂಗಾಳ ರಾಜ್ಯದ ಹೆಸರು ಬದಲಾಯಿಸುವ ಮಸೂದೆ ಶೀಘ್ರವೇ ಮಂಡನೆ: ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ
ಸಮಿಕ್ ಭಟ್ಟಾಚಾರ್ಯ |Photo Credit : PTI
ಕೋಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ‘ಪಶ್ಚಿಮ ಬಂಗಾ’ ಎಂದು ಬದಲಾಯಿಸುವ ಮಸೂದೆಯನ್ನು ರಾಜ್ಯ ಸರಕಾರ ಶೀಘ್ರದಲ್ಲೇ ವಿಧಾನಸಭೆಯಲ್ಲಿ ಮಂಡಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಹೇಳಿದ್ದಾರೆ.
ವಾರಾಣಸಿಯಲ್ಲಿ ಪಶ್ಚಿಮ ಬಂಗಾ ಭವನ ನಿರ್ಮಾಣ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಿಕ್ ಭಟ್ಟಾಚಾರ್ಯ, ಪಶ್ಚಿಮ ಬಂಗಾ ಎಂಬ ಹೆಸರನ್ನು ಬಳಸುವ ಉದ್ದೇಶವು ಇತಿಹಾಸದೊಂದಿಗೆ ಅದರ ಸಂಪರ್ಕ ಕಲ್ಪಿಸುವುದಾಗಿದೆ. ಇನ್ನು ಮುಂದೆ ನೀವು ʼಬಾಂಗ್ಲಾʼ ಅಥವಾ ʼಪಶ್ಚಿಮ ಬಂಗಾಳʼ ಎಂಬ ಹೆಸರುಗಳನ್ನು ಉಚ್ಚರಿಸುವ ಅಗತ್ಯವಿರುವುದಿಲ್ಲ. ನಮ್ಮ ರಾಜ್ಯದ ಹೆಸರನ್ನು ಅದರ ಇತಿಹಾಸಕ್ಕೆ ಅನುಗುಣವಾಗಿ ‘ಪಶ್ಚಿಮ ಬಂಗಾ’ ಎಂದು ಬದಲಾಯಿಸುವ ಮಸೂದೆಯನ್ನು ರಾಜ್ಯ ಸರಕಾರ ಶೀಘ್ರದಲ್ಲೇ ವಿಧಾನಸಭಾ ಅಧಿವೇಶನದಲ್ಲೇ ಮಂಡಿಸಲಿದೆ” ಎಂದು ಹೇಳಿದರು.
ರಾಜ್ಯದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಸರಕಾರ ಹಾಗೂ ಕೂಚ್ ಬೆಹಾರ್ ರಾಜಮನೆತನದ ವಂಶಸ್ಥರೊಂದಿಗೆ ಸೇರಿ ವಾರಾಣಸಿಯಲ್ಲಿ ‘ಪಶ್ಚಿಮ ಬಂಗಾ ಭವನ’ ನಿರ್ಮಿಸಲು ಯೋಜಿಸಿದೆ ಎಂದು ಹೇಳಿದರು.
ಅವರ ಪ್ರಕಾರ, ಈ ಭವನವು ರಾಜ್ಯದ ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಬಂಗಾಳದಿಂದ ವಾರಾಣಸಿಗೆ ಆಗಮಿಸುವ ಪ್ರವಾಸಿಗರು ಹಾಗೂ ಯಾತ್ರಿಕರಿಗೆ ವಸತಿ ಸೌಲಭ್ಯವನ್ನು ಒದಗಿಸಲಿದೆ.