BJP ಐಟಿ ಸೆಲ್‌ಗೆ ಹೊಸ ಮುಖ್ಯಸ್ಥ; ಅಮಿತ್ ಮಾಳವೀಯ ಗೆ ಗೇಟ್ ಪಾಸ್
ಅಮಿತ್ ಮಾಳವಿಯಾ | Photo Credit : X\ @amitmalviya
ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ (BJP) ತನ್ನ ಸಂಘಟನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದರ ಭಾಗವಾಗಿ ಪಕ್ಷದ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಛತ್ತೀಸ್‌ಗಢದ BJP ನಾಯಕ ದೀಪಕ್ ಮಾಸ್ಕಿ ಅವರು ಐಟಿ ಸೆಲ್ ಹೊಸ ಮುಖ್ಯಸ್ಥರಾಗಿದ್ದಾರೆ.
ಸಾಮಾಜಿಕ ಮಾಧ್ಯಮ ತಂಡದಲ್ಲೂ ಪಕ್ಷ ಬದಲಾವಣೆ ಮಾಡಿದೆ. ನಾಲ್ಕು ರಾಜ್ಯಗಳಿಂದ ನಾಲ್ವರನ್ನು ಹೊಸ ಸಂಯೋಜಕರಾಗಿ ನೇಮಿಸಲಾಗಿದೆ. ಮಹಾರಾಷ್ಟ್ರದಿಂದ ಪ್ರೀತಿ ಗಾಂಧಿ, ದಿಲ್ಲಿಯಿಂದ ಶಿವಾನಂದ ದ್ವಿವೇದಿ, ಉತ್ತರಾಖಂಡದಿಂದ ಅಲೋಕ್ ಭಟ್ ಮತ್ತು ಹರಿಯಾಣದಿಂದ ಅರುಣ್ ಯಾದವ್ ಅವರನ್ನು ಸಂಯೋಜಕರನ್ನಾಗಿ ನೇಮಿಸಲಾಗಿದೆ.
ಮಾಳವೀಯ ಅವರನ್ನು 2015ರಲ್ಲಿ ಆಗಿನ BJP ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಬಳಿಕ ಮಾಳವೀಯ ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿಯೂ ಕೆಲಸ ಮಾಡಿದ್ದರು.