×
Ad

ಸುಪ್ರೀಂ ಕೋರ್ಟ್‌ಗೆ ಹಾಜರಾದ ಅಂಧ ವಕೀಲೆ : ನ್ಯಾಯಾಲಯದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು

Update: 2025-06-08 10:52 IST

 Photo | livelaw

ಹೊಸದಿಲ್ಲಿ : ಇದೇ ಮೊದಲ ಬಾರಿಗೆ ಅಂಧ ವಕೀಲರೋರ್ವರು ಸುಪ್ರೀಂ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದಾರೆ. ಇದು ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಹುಟ್ಟುವಾಗಲೇ ದೃಷ್ಟಿ ದೋಷವನ್ನು ಹೊಂದಿದ್ದ ಅಂಚಲ್ ಭತೇಜಾ ನಂತರ ರೆಟಿನೋಪತಿಯಿಂದಾಗಿ ಸಂಪೂರ್ಣವಾಗಿ ದೃಷ್ಟಿಯನ್ನು ಕಳೆದುಕೊಂಡಿದ್ದರು. ಜೂನ್.6ರಂದು ಅಂಚಲ್ ಭತೇಜಾ ಸುಪ್ರೀಂ ಕೋರ್ಟ್ ಮುಂದೆ ಅರ್ಜಿದಾರರ ಪರವಾಗಿ ಹಾಜರಾಗಿದ್ದರು.

ಶಾಲಾ ಶಿಕ್ಷಣವನ್ನು ಆಡಿಯೋಬುಕ್‌ಗಳ ಸಹಾಯದಿಂದ ಪೂರ್ಣಗೊಳಿಸಿದ ಅಂಚಲ್ ಭತೇಜಾ 2023ರಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು.

ಉತ್ತರಾಖಂಡ ಸಿವಿಲ್ ನ್ಯಾಯಾಧೀಶರ ನೇಮಕಾತಿಗಾಗಿ ಹೊರಡಿಸಲಾದ ಜಾಹೀರಾತಿನ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿದಾರರ ಪರವಾಗಿ ಭತೇಜಾ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಂದೆ ಹಾಜರಾದರು. 

ಜೂನ್ 6ರಂದು ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರ ಪೀಠದ ಮುಂದೆ ಅವರು ತುರ್ತು ವಿಚಾರಣೆಗೆ ವಿಷಯವನ್ನು ಪ್ರಸ್ತಾಪಿಸಿದರು. ಜೂನ್ 9ಕ್ಕೆ ಈ ಬಗ್ಗೆ ವಿಚಾರಣೆಗೆ ಪಟ್ಟಿ ಮಾಡುವಂತೆ ನ್ಯಾಯಾಲಯವು ಒಪ್ಪಿಕೊಂಡಿತು.

ಸುಪ್ರೀಂ ಕೋರ್ಟ್‌ಗೆ ಹಾಜರಾದ ಅನುಭವವನ್ನು ಭತೇಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ . ʼಇದು ಸಂತೋಷ ಮತ್ತು ದುಃಖ ಎರಡನ್ನೂ ತರುವ ಕ್ಷಣವಾಗಿದೆ. ನಾನು ಇಲ್ಲಿದ್ದೇನೆ ಎಂದು ಹೆಮ್ಮೆಪಡುತ್ತೇನೆ. ಆದರೆ, ನಾನು ಮೊದಲಿಗಳಾಗದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ನನಗೆ ಅನಿಸುತ್ತಿದೆʼ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News