×
Ad

ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯನ ಶ್ವಾಸಕೋಶ, ಹೃದಯ ಸೇರಿದಂತೆ ಅಂಗಾಂಗಗಳು ಕಾಣೆ: ಕುಟುಂಬಸ್ಥರ ಆರೋಪ, ತನಿಖೆಗೆ ಒತ್ತಾಯ

Update: 2026-07-01 16:42 IST

ರಾಕೇಶ್ ಚೌಹಾಣ್ | Photo Credit : X \ @FSUIINDIA

ಹೊಸದಿಲ್ಲಿ: ವೆನೆಜುವೆಲಾದಲ್ಲಿ ಮೇ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾದ ಭಾರತೀಯ ನಾವಿಕನ ಮೃತದೇಹವನ್ನು ಭಾರತಕ್ಕೆ ತರಿಸಿದ ಬಳಿಕ ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅವರ ದೇಹದಿಂದ ಮೆದುಳು, ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ಹಲವು ಆಂತರಿಕ ಅಂಗಾಂಗಗಳು ಕಾಣೆಯಾಗಿವೆ ಎಂದು ಕುಟುಂಬ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ನಾವಿಕರ ಒಕ್ಕೂಟಗಳ ಫೆಡರೇಶನ್ (FSUI) ಅವರ ಸಾವಿನ ಬಗ್ಗೆ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದು, ಚೌಹಾಣ್ ಅವರ ಮೃತದೇಹವನ್ನು ಯಾವುದೇ ಶವಪರೀಕ್ಷೆ ವರದಿ ಅಥವಾ ವೆನೆಜುವೆಲಾ ಅಧಿಕಾರಿಗಳಿಂದ ಯಾವುದೇ ವಿವರಗಳಿಲ್ಲದೆ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿರುವ ಅವರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಲಗ್ಡಾ ಬಜಾರ್ ಟೋಲಾ ನಿವಾಸಿಯಾಗಿದ್ದ ರಾಕೇಶ್‌ ಚೌಹಾಣ್(33), 2025ರ ನವೆಂಬರ್ ನಲ್ಲಿ ವ್ಯಾಪಾರಿ ನೌಕೆಯ ಸಿಬ್ಬಂದಿಯಾಗಿ ಕೆಲಸ ಮಾಡಲು ವೆನೆಜುವೆಲಾಕ್ಕೆ ತೆರಳಿದ್ದರು.

ಆರಂಭದಲ್ಲಿ ಕಂಪನಿಯ ಅಧಿಕಾರಿಗಳು ದೂರವಾಣಿ ಮೂಲಕ ಚೌಹಾಣ್ ಹಡಗಿನಲ್ಲಿ ಬಿದ್ದು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಮರುದಿನ ಬೆಳಗ್ಗೆ ಚೌಹಾಣ್ ಬದುಕುಳಿಯುವ ಸಾಧ್ಯತೆ ಕೇವಲ ಶೇ.95ರಷ್ಟು ಕಡಿಮೆ ಇದೆ ಎಂದು ತಿಳಿಸಲಾಯಿತಾದರೂ, ಅದೇ ದಿನ ಸಂಜೆ ಕಂಪನಿಯು ಅವರ ಸಾವನ್ನು ದೃಢಪಡಿಸಿತು. ಸಾವಿನ ಕಾರಣದ ಬಗ್ಗೆ ಕುಟುಂಬ ವಿಚಾರಿಸಿದಾಗ, ಬಿದ್ದ ಪರಿಣಾಮ ಉಂಟಾದ ಗಂಭೀರ ಗಾಯಗಳಿಂದ ಅವರು ಮೃತಪಟ್ಟಿದ್ದಾರೆ ಎಂದು ಕಂಪನಿ ಹೇಳಿದೆ ಎಂದು ಮೃತ ನಾವಿಕನ ತಂದೆ ರಾಮ್ ದೇವ್ ಚೌಹಾಣ್ ತಿಳಿಸಿದ್ದಾರೆ.

ನಾವಿಕನ ಮೃತದೇಹವನ್ನು ಒಂದು ವಾರದೊಳಗೆ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಕಂಪನಿ ಭರವಸೆ ನೀಡಿದ್ದರೂ, ಸುಮಾರು ಒಂದು ತಿಂಗಳ ಬಳಿಕ ಜೂನ್ 4ರಂದು ಮಾತ್ರ ಮೃತದೇಹ ದೇವರಿಯಾಕ್ಕೆ ತಲುಪಿತು ಎಂದು ಅವರು ಆರೋಪಿಸಿದ್ದಾರೆ.

ಸಾವಿನ ಬಗ್ಗೆ FSUI ತನ್ನ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದು, “ಕುಟುಂಬವು ಮರು ಶವಪರೀಕ್ಷೆಗೆ ಒತ್ತಾಯಿಸಿತು. ಭಾರತದಲ್ಲಿ ನಡೆಸಲಾದ ಅಧಿಕೃತ ಪೋಸ್ಟ್ ಮಾರ್ಟಂ ವರದಿಯಲ್ಲಿ ಭಯಾನಕ ಸತ್ಯ ಹೊರಬಂದಿದೆ. ದೇಹದಲ್ಲಿ ಒಂದೇ ಒಂದು ಅಂಗವೂ ಪತ್ತೆಯಾಗಿಲ್ಲ. ಮೆದುಳು ಕಾಣೆಯಾಗಿದೆ, ಹೃದಯ ಕಾಣೆಯಾಗಿದೆ, ಎರಡೂ ಶ್ವಾಸಕೋಶಗಳು ಕಾಣೆಯಾಗಿವೆ. ಯಕೃತ್ತು, ಮೂತ್ರಪಿಂಡಗಳು, ಪ್ಯಾಂಕ್ರಿಯಾ, ಮೇದೋಜೀರಕ ಗ್ರಂಥಿ, ಹೊಟ್ಟೆ, ಕರುಳುಗಳು — ಎಲ್ಲವೂ ಕಾಣೆಯಾಗಿವೆ. ಥೈರಾಯ್ಡ್, ಹಯಾಯ್ಡ್, ಧ್ವನಿಪೆಟ್ಟಿಗೆ ಮತ್ತು ಶ್ವಾಸನಾಳ ಕೂಡ ಕಾಣೆಯಾಗಿವೆ"ಎಂದು ಗಂಭೀರ ಆರೋಪಗಳನ್ನು ಮಾಡಿದೆ.

"ಇದು ಸ್ವೀಕಾರಾರ್ಹವಲ್ಲ. ನಾವಿಕರು ಬಲಿಪಶುಗಳಾಗುತ್ತಿದ್ದಾರೆ. ವೆನೆಜುವೆಲಾ ಅಧಿಕಾರಿಗಳಿಂದ ಸಂಪೂರ್ಣ ತನಿಖೆ ಮತ್ತು ಜವಾಬ್ದಾರಿಯನ್ನು ನಾವು ಒತ್ತಾಯಿಸುತ್ತೇವೆ. ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ತಕ್ಷಣದ ಮಧ್ಯಸ್ಥಿಕೆ, ಸಂಪೂರ್ಣ ಶವಪರೀಕ್ಷೆ ವರದಿ, ಸಾವಿನ ಪರಿಸ್ಥಿತಿಗಳ ವಿವರ, ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ನೀಡಬೇಕು" ಎಂದು FSUI ಆಗ್ರಹಿಸಿದೆ.

ಶವಪರೀಕ್ಷೆಯಲ್ಲಿ ಬಹಿರಂಗವಾದ ಸಂಗತಿಗಳು:

ದೇವರಿಯಾದಲ್ಲಿ ಪೊಲೀಸರು ಉಪಸ್ಥಿತಿಯಲ್ಲಿ ವೈದ್ಯರ ತಂಡವು ಮೃತದೇಹವನ್ನು ಪರಿಶೀಲಿಸಿತು. ಆದರೆ ಈಗಾಗಲೇ ಶವಪರೀಕ್ಷೆ ನಡೆದಿರುವಂತೆ ಕಾಣಿಸುತ್ತಿದೆ ಮತ್ತು ಅಧಿಕೃತ ಆದೇಶವಿಲ್ಲದೆ ಮತ್ತೊಂದು ಶವಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ವೈದ್ಯರು ಶವಪರೀಕ್ಷೆ ನಡೆಸಲು ನಿರಾಕರಿಸಿದರು.

ಬಳಿಕ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶವಪರೀಕ್ಷೆ ನಡೆಸಲಾಯಿತು. ಈ ವೇಳೆ ಚೌಹಾಣ್ ಅವರ ದೇಹದಲ್ಲಿನ ಎಲ್ಲಾ ಆಂತರಿಕ ಅಂಗಾಂಗಗಳು ಕಾಣೆಯಾಗಿರುವುದು ಗೊತ್ತಾಗಿದೆ ಎಂದು ವರದಿಯಾಗಿದೆ.

"ಎರಡೂ ಕಣ್ಣುಗಳು ಮತ್ತು ಬಾಯಿ ಮುಚ್ಚಿವೆ. ಕುತ್ತಿಗೆಯಿಂದ ಪ್ಯೂಬಿಕ್ ಸಿಂಫಿಸಿಸ್ವರೆಗೆ ಛೇದನ ಮತ್ತು 22 ಹೊಲಿಗೆಗಳಿದ್ದು, ಇದರ ಉದ್ದ 60 ಸೆಂ.ಮೀ. ಇದೆ. ಎಡ ಕಿವಿಯಿಂದ ಬಲ ಕಿವಿವರೆಗೆ ಆಕ್ಸಿಪಿಟಲ್ ಭಾಗದಲ್ಲಿ ಛೇದನ ಮತ್ತು 21 ಹೊಲಿಗೆ ಗುರುತುಗಳಿದ್ದು, ಇದರ ಉದ್ದ 20 ಸೆಂ.ಮೀ. ಇದೆ. ದೇಹವು ನೀಲಿ ಬಣ್ಣದಲ್ಲಿದ್ದು, ಕೆಲವು ಭಾಗಗಳಲ್ಲಿ ಚರ್ಮ ಉದುರಿರುವುದು ಕಂಡುಬಂದಿದೆ. ಮೃತದೇಹವನ್ನು 07-05-2026ರಿಂದ 05-06-2026ರವರೆಗೆ ಡೀಪ್ ಫ್ರೀಜರ್ ನಲ್ಲಿ ಇರಿಸಲಾಗಿತ್ತು." ಎಂದು ಶವಪರೀಕ್ಷೆಯ ವರದಿಯಲ್ಲಿ ವೈದ್ಯರು ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News