×
Ad

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ಮಹತ್ವದ ಸಚಿವ ಸಂಪುಟ ಸಭೆ; ಎಲ್ಲಾ ಸಚಿವರಿಗೆ ದಿಲ್ಲಿಯಲ್ಲೇ ಇರಲು ಸೂಚನೆ

Update: 2026-05-21 00:01 IST

photo credit : PTI

ಹೊಸದಿಲ್ಲಿ, ಮೇ 20: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಲಿರುವ ಮಹತ್ವದ ಸಚಿವ ಸಂಪುಟ ಸಭೆಗೆ ಮುನ್ನ ಎಲ್ಲ ಕೇಂದ್ರ ಸಚಿವರು ಹೊಸದಿಲ್ಲಿಯಲ್ಲೇ ಇರಲು ಸೂಚಿಸಲಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷ ಪರಿಸ್ಥಿತಿ, ಅದರ ಆರ್ಥಿಕ ಪರಿಣಾಮಗಳು ಹಾಗೂ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕುರಿತ ವಿಚಾರಗಳು ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಸಂಜೆ 4 ಗಂಟೆಗೆ ಸೇವಾ ತೀರ್ಥದಲ್ಲಿ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ನಡೆಯುತ್ತಿರುವ ಮೊದಲ ಸಭೆಯಾಗಲಿದೆ. ಕೇಂದ್ರ ಸಂಪುಟ ಸಚಿವರು, ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಹಾಗೂ ರಾಜ್ಯ ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ, ಇಂಧನ ಪೂರೈಕೆ ಸರಪಳಿ ಮತ್ತು ಹಣದುಬ್ಬರದ ಮೇಲಿನ ಪರಿಣಾಮಗಳ ಕುರಿತು ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ. ಪರಿಸ್ಥಿತಿಯ ಮೇಲೆ ಸರ್ಕಾರ ನಿಗಾ ವಹಿಸಿದ್ದು, ಭಾರತಕ್ಕೆ ಆಗಬಹುದಾದ ಪರಿಣಾಮಗಳನ್ನು ತಡೆಯುವ ಕ್ರಮಗಳ ಕುರಿತು ಸಮಾಲೋಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪರಿಸ್ಥಿತಿಯ ಮೇಲ್ವಿಚಾರಣೆಗೆ ಸರ್ಕಾರವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಅನೌಪಚಾರಿಕ ಸಚಿವರ ಸಮಿತಿಯನ್ನು ರಚಿಸಿದೆ. ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಹರ್ದೀಪ್ ಸಿಂಗ್ ಪುರಿ ಸಮಿತಿಯ ಸದಸ್ಯರಾಗಿದ್ದಾರೆ.

“ಕಚ್ಚಾ ತೈಲ, ಇಂಧನ ಹಾಗೂ ಎಲ್ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಸಾಕಷ್ಟು ಸಂಗ್ರಹ ದೇಶದಲ್ಲಿದೆ. ಆತಂಕಪಡುವ ಪರಿಸ್ಥಿತಿ ಇಲ್ಲ” ಎಂದು ರಾಜನಾಥ್ ಸಿಂಗ್ ಇತ್ತೀಚೆಗೆ ಹೇಳಿದ್ದರು. ಸರ್ಕಾರ ಪರಿಸ್ಥಿತಿಯ ಮೇಲೆ 24/7 ನಿಗಾ ಇಟ್ಟಿದೆ ಎಂದೂ ಅವರು ತಿಳಿಸಿದ್ದರು.

ಜೂನ್ 10ರಂದು ಮೋದಿ 3.0 ಸರ್ಕಾರಕ್ಕೆ ಎರಡು ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ರಚನೆ ಕುರಿತ ಊಹಾಪೋಹಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಜೂನ್ ಎರಡನೇ ವಾರದಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಗಳು ಸಂಭವಿಸಬಹುದು ಎಂದು ಅಧಿಕೃತ ಮೂಲಗಳು ಸೂಚಿಸಿವೆ.

ಸಂಭಾವ್ಯ ಪುನರ್ರಚನೆಗೆ ಮುನ್ನ ವಿವಿಧ ಸಚಿವಾಲಯಗಳ ಕಾರ್ಯಕ್ಷಮತೆ ಹಾಗೂ ಆಡಳಿತಾತ್ಮಕ ಕಾರ್ಯನಿರ್ವಹಣೆಯ ಮೌಲ್ಯಮಾಪನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News