×
Ad

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ವರದಿ : ಪತ್ರಕರ್ತ ಅಜಿತ್ ಅಂಜುಮ್ ವಿರುದ್ಧ ಪ್ರಕರಣ ದಾಖಲು

Update: 2025-07-14 22:46 IST

ಪಾಟ್ನಾ : ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಸ್ವತಂತ್ರ ಪತ್ರಕರ್ತ ಅಜಿತ್ ಅಂಜುಮ್ ವಿರುದ್ಧ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಜುಲೈ 12ರಂದು ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊವೊಂದರಲ್ಲಿ, ಬೇಗುಸರಾಯ್‌ನ ಸಾಹೇಬ್ಪುರ ಕಮಲ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಅಜಿತ್ ಅಂಜುಮ್ ಆರೋಪಿಸಿದ್ದಾರೆ.ಜಿಲ್ಲಾಡಳಿತವು ಅವರ ಹೇಳಿಕೆಯನ್ನು ಆಧಾರರಹಿತ ಎಂದು ತಳ್ಳಿ ಹಾಕಿದೆ. ಸಾರ್ವಜನಿಕರ ಭಾವನೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.

ಬೂತ್ ಮಟ್ಟದ ಅಧಿಕಾರಿ ಮುಹಮ್ಮದ್ ಅನ್ಸಾರುಲ್ಹಕ್ ಅವರ ದೂರಿನ ಆಧಾರದ ಮೇಲೆ ಜುಲೈ 13ರಂದು ಬಾಲಿಯಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ.

ʼಆ್ಯಪ್‌ನಲ್ಲಿ ಡೇಟಾವನ್ನು ಅಪ್ಲೋಡ್ ಮಾಡುತ್ತಿದ್ದಾಗ ಅಜಿತ್ ಅಂಜುಮ್ ಮತ್ತು ಅವರ ಸಹೋದ್ಯೋಗಿಗಳು ಬಂದು ಆ ಪ್ರದೇಶದ ಮುಸ್ಲಿಂ ಮತದಾರರ ಬಗ್ಗೆ ಪ್ರಶ್ನೆ ಕೇಳಿದರು. ಮುಸ್ಲಿಂ ಮತದಾರರಿಗೆ ತೊಂದರೆ ನೀಡಲಾಗುತ್ತಿದೆ ಎಂಬ ಅಂಜುಂ ಅವರ ಆರೋಪ ಸುಳ್ಳುʼ ಎಂದು ಮುಹಮ್ಮದ್ ಅನ್ಸಾರುಲ್ಹಕ್ ಹೇಳಿದರು.

ಬೇಗುಸರಾಯ್ ಎಸ್ಪಿ ಎಫ್ಐಆರ್ ದಾಖಲಿಸಿರುವುದನ್ನು ದೃಢಪಡಿಸಿದ್ದಾರೆ.

ಎಫ್ಐಆರ್ ಬಗ್ಗೆ ಪ್ರತಿಕ್ರಿಯಿಸಿದ ಅಜಿತ್ ಅಂಜುಮ್, ನನ್ನ ವಿರುದ್ಧ ಮುಸ್ಲಿಂ ಬಿಎಲ್ಒ ಓರ್ವರನ್ನು ಬಲಿಪಶುವಾಗಿ ಬಳಸಲಾಗುತ್ತಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ʼಬೇಗುಸರೈನಲ್ಲಿ ಬಿಎಲ್ಒ ಮೇಲೆ ಒತ್ತಡ ಹೇರಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವೀಡಿಯೊವನ್ನು ನೋಡಿ ಮತ್ತು ನಾನು ಆ ಮುಸ್ಲಿಂ ಬಿಎಲ್ಒಗೆ ಕೋಮು ಸಾಮರಸ್ಯವನ್ನು ಕದಡುವ ಏನಾದರೂ ಹೇಳಿದ್ದೇನೆಯೇ ಎಂದು ನೀವೇ ನಿರ್ಧರಿಸಿ. ಅವರಿಗೆ ಬೇರೆ ಏನೂ ಸಿಗದಿದ್ದಾಗ, ಅವರು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ನನ್ನ ವಿರುದ್ಧ ಮುಸ್ಲಿಂ ಬಿಎಲ್ಒ ಓರ್ವರನ್ನು ಬಲಿಪಶುವಾಗಿ ಬಳಸಲಾಗುತ್ತಿದೆ. ವೀಡಿಯೊದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಆಡಳಿತವು ಬೆದರಿಕೆ ಹಾಕುತ್ತಿದೆ. ನಾನು ಇನ್ನೂ ಬೇಗುಸರೈನಲ್ಲಿದ್ದೇನೆ. ಅಗತ್ಯಬಿದ್ದರೆ, ನಾನು ಈ ಹೋರಾಟವನ್ನು ಸುಪ್ರೀಂ ಕೋರ್ಟ್‌ವರೆಗೆ ಕೊಂಡೊಯ್ಯುತ್ತೇನೆ. ನಾನು ಹೆದರುವುದಿಲ್ಲʼ ಎಂದು ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವೀಡಿಯೊ ಬಾಲಿಯಾ ಬ್ಲಾಕ್‌ನಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣಾ ಅಭಿಯಾನದ ಕುರಿತ ವರದಿಯಾಗಿದೆ. ಇದರಲ್ಲಿ ಅಗತ್ಯ ದಾಖಲೆಗಳು ಅಥವಾ ಪೋಟೊಗಳಿಲ್ಲದೆ ಹೆಚ್ಚಿನ ಸಂಖ್ಯೆಯ ಮತದಾರರ ಫಾರ್ಮ್‌ಗಳನ್ನು ಹೇಗೆ ಭರ್ತಿ ಮಾಡಲಾಗುತ್ತಿದೆ ಮತ್ತು ಅಪ್ಲೋಡ್ ಮಾಡಲಾಗುತ್ತಿದೆ ಎಂಬುದನ್ನು ತೋರಿಸಲಾಗಿದೆ.

ವರದಿಯು ಬಾಲಿಯಾದ ಬಿಎಲ್ಒ ಮತ್ತು ಮೇಲ್ವಿಚಾರಕರೊಂದಿಗೆ ನೇರ ಸಂಭಾಷಣೆಗಳನ್ನು ಒಳಗೊಂಡಿದೆ. ಇದರಲ್ಲಿ ಅನೇಕ ಫಾರ್ಮ್‌ಗಳು ಅಪೂರ್ಣವಾಗಿವೆ, ಕೆಲವು ಹೆಸರುಗಳು, ಸಹಿಗಳು ಅಥವಾ ಯಾವುದೇ ರೀತಿಯ ಗುರುತಿನ ಪುರಾವೆಗಳು ಇಲ್ಲ ಎಂದು ಹೇಳಲಾಗಿದೆ. ʼಮುಸ್ಲಿಂ ಬಹುಸಂಖ್ಯಾತʼ ಬೂತ್‌ಗಳ ಶೇಕಡಾ 80 ಕ್ಕೂ ಹೆಚ್ಚು ಜನರು ಸರಿಯಾದ ದಾಖಲೆಗಳೊಂದಿಗೆ ಫಾರ್ಮ್‌ಗಳನ್ನು ಸಲ್ಲಿಸಿದ್ದಾರೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಬಾಂಗ್ಲಾದೇಶಿಗಳು ಅಥವಾ ರೋಹಿಂಗ್ಯಾಗಳನ್ನು ಮತದಾರರಾಗಿ ಪಟ್ಟಿ ಮಾಡಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಸುಳ್ಳು ಎಂದು ಬಿಎಲ್ಒ ಸ್ಪಷ್ಟಪಡಿಸುವುದು ವೀಡಿಯೊದಲ್ಲಿ ಕಂಡು ಬಂದಿದೆ.

ಸೌಜನ್ಯ: newslaundry.com



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News